ಸಂಚಾರಿ ಹಾಲು ಶೀತಲೀಕರಣ ಘಟಕ ಉದ್ಘಾಟನೆ
ಶೀತಲೀಕರಣ ಘಟಕ ಉದ್ಘಾಟನೆ

ಮಂಗಳೂರು, ನ.19: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಸಂಚಾರಿ ಹಾಲು ಶೀತಲೀಕರಣ ಘಟಕ (ಮೊಬೈಲ್ ಬಿಎಂಸಿ ಯುನಿಟ್) ಉದ್ಘಾಟನೆ ಹಾಗೂ ನಂದಿನಿ ತೃಪ್ತಿ (ಯು.ಎಚ್.ಟಿ.) ಹಾಲು 180 ಮಿ.ಲಿ.,ಪ್ಯಾಕೆಟ್ ಬಿಡುಗಡೆ ಮಾಡಲಾಯಿತು.
ಕುಲಶೇಖರ ಮಂಗಳೂರು ಡೇರಿ ಆವರಣದಲ್ಲಿ ಶನಿವಾರ 63ನೆ ಅಖಿಲ ಭಾರತ ಸಹಕಾರಿ ಸಪ್ತಾಹ ಅಂಗವಾಗಿ ಸಹಕಾರ ಸಂಘಗಳು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ ಅಧ್ಯಕ್ಷ ಪಿ. ನಾಗರಾಜ್ ಮಾತನಾಡಿ, ಹೈನುಗಾರಿಕೆ ಎಂದರೆ ಚಿನ್ನ ಬೆಳ್ಳಿ ವ್ಯಾಪಾರಕ್ಕೆ ಸಮನಾದುದು. ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಹೈನುಗಾರಿಕೆ, ಕೃಷಿ ಮೂಲಕ ರೈತರ ಅಭಿವೃದ್ಧಿ ಸಾಧ್ಯವಿದೆ. ಇದು ಸಹಕಾರಿ ಒಕ್ಕೂಟಗಳ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ನೂತನ ನಂದಿನಿ ತುಪ್ಪ ಉತ್ಪಾದನಾ ಘಟಕ ಉದ್ಘಾಟಿಸಿದ ದ.ಕ. ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಮಂಗಳೂರಿನ ಹಾಲು ಉತ್ಪಾದಕರ ಒಕ್ಕೂಟ ಸಂಸ್ಥೆಯು ಸೇವೆ ಹಾಗೂ ಗುಣಮಟ್ಟದಲ್ಲಿ ರಾಜ್ಯದ ಇತರ ಒಕ್ಕೂಟಗಳಿಗೆ ಮಾದರಿಯಾಗಿದೆ. ಸಹಕಾರಿ ಸಂಸ್ಥೆಗಳ ಉಳಿವಿಗೆ ಮಂಗಳೂರು ಒಕ್ಕೂಟದ ಮಾದರಿಯನ್ನು ಎಲ್ಲಾ ಒಕ್ಕೂಟಗಳು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ನಿಟ್ಟೆ ವಿವಿ ಉಪಕುಲಪತಿ ಪ್ರೊ.ಡಾ.ಎಂ. ಶಾಂತರಾಮ ಶೆಟ್ಟಿ ನಂದಿನಿ ತೃಪ್ತಿ ಪ್ಯಾಕೆಟ್‌ಅನಾವರಣಗೊಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ, ರಾಜ್ಯದಲ್ಲಿ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಸಂಚಾರಿ ಹಾಲು ಶೀತಲೀಕರಣ ಘಟಕ ವಾಹನ ಅಳವಡಿಸಿಕೊಂಡಿದೆ. ಮುಂದಿನ ಬಾರಿ ಉಪ್ಪೂರಿನಲ್ಲಿ 2 ಲಕ್ಷ ಲೀ.ನ ಡೈರಿ ಯುನಿಟ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.
*ಸನ್ಮಾನ, ನಿಧಿ ಹಸ್ತಾಂತರ:
3 ದಶಕಗಳ ಕಾಲ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯನಿರ್ವಹಣಾಧಿಕಾರಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಸಾವಿತ್ರಿ ರೈ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಒಕ್ಕೂಟದಿಂದ 7.50 ಲಕ್ಷ ರೂ.ಗಳ ಸಹಕಾರಿ ಶಿಕ್ಷಣ ನಿಧಿಯನ್ನು ಸಹಕಾರಿ ಯೂನಿಯನ್‌ಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಹಾಗೂ ಒಕ್ಕೂಟದ ನಿರ್ದೇಶಕರುಗಳು ಉಪಸ್ಥಿತರಿದ್ದರು.
ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಸ್ವಾಗತಿಸಿದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ ವಂದಿಸಿದರು. ಜಯದೇವ್ ನಿರೂಪಿಸಿದರು.







