ದ.ಕ. ಜಿಲ್ಲೆಗೆ ಪ್ರಶಸ್ತಿ
ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ, ನ.19: ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ನಡೆದ ಪಪೂ ಕಾಲೇಜುಗಳ ರಾಜ್ಯ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಎರಡೂ ವಿಭಾಗಗಳಲ್ಲಿ ದ.ಕ. ಜಿಲ್ಲಾ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬಾಲಕರ ವಿಭಾಗದಲ್ಲಿ ಅಂತಿಮ ಪಂದ್ಯದಲ್ಲಿ ದ.ಕ. ಜಿಲ್ಲೆಯ ತಂಡ ನೇರ ಸೆಟ್‌ಗಳಲ್ಲಿ ನೆರೆಯ ಉಡುಪಿ ಜಿಲ್ಲಾ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ವಿಭಾಗದಲ್ಲಿ ಉತ್ತಮ ಸೆಟ್ಟರ್ ಆಗಿ ಗಗನ್ ಪೂಜಾರಿ (ಮಂಗಳೂರು), ಉತ್ತಮ ಹೊಡೆತಗಾರ ಶಿವಪ್ರಸಾದ್ (ಮಂಗಳೂರು), ಸರ್ವಾಂಗೀಣ ಆಟಗಾರನಾಗಿ ದೀಕ್ಷಿತ್ ಶೆಟ್ಟಿ (ಉಡುಪಿ) ಹಾಗೂ ಲಿಬ್ರೋ ಮಹಮ್ಮದ್ ಫಯಾಝ್( ಉಡುಪಿ) ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಮಂಗಳೂರು ತಂಡ ಬೆಂಗಳೂರು ಉತ್ತರ ಜಿಲ್ಲಾ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ವಿಭಾಗದಲ್ಲಿ ಉತ್ತಮ ಸೆಟ್ಟರ್ ಆಗಿ ಯಶೋಧಾ(ದ.ಕ), ಉತ್ತಮ ಹೊಡೆತಗಾರರಾಗಿ ಮೇಘಾ(ಬೆಂಗಳೂರು), ಸರ್ವಾಂಗೀಣ ಆಟಗಾರ್ತಿಯಾಗಿ ಸಾಲಿಯೆಟ್ (ದ.ಕ), ಉತ್ತಮ ಲಿಬ್ರೋ ಆಗಿ ಶಕುಬಾಯಿ (ದ.ಕ) ಆಯ್ಕೆಯಾಗಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್ ಪ್ರಭಾಕರ್ ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಿದರು.





