ದೇವಳದ ಜಾತ್ರೆ ವೇಳೆ ಆನೆಗಳಿಗೆ ಹಿಂಸೆ: ಆರೋಪ
ತಿರುವನಂತಪುರಂ, ನ.19: ಕೊಟ್ಟಾಯಂನಲ್ಲಿರುವ ವೈಕಂ ಮಹಾದೇವ ದೇವಳದ ಜಾತ್ರೆಯ ಸಂದರ್ಭ ಆನೆಗಳಿಗೆ ಹಿಂಸೆ ನೀಡಲಾಗಿದೆ ಎಂದು ಪ್ರಾಣಿಗಳ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ತ್ರಿಶೂರ್ ಮೂಲದ ‘ಹೆರಿಟೇಜ್ ಎನಿಮಲ್ ಟಾಸ್ಕ್‌ಫೋರ್ಸ್’ ಆರೋಪಿಸಿದೆ.
ದೇವಸ್ಥಾನದಲ್ಲಿ ನ.16 ಮತ್ತು 17ರಂದು ನಡೆದ ಜಾತ್ರೆಯ ಸಂದರ್ಭ ಮೂರಕ್ಕೂ ಹೆಚ್ಚು ಆನೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತ ಕವಾಯತು ಮಾಡಿಸಲಾಗಿದ್ದು ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಟಾಸ್ಕ್‌ಫೋರ್ಸ್‌ನ ಕಾರ್ಯದರ್ಶಿ ವಿ.ಕೆ.ವೆಂಕಟಾಚಲಂ ಹೇಳಿದ್ದಾರೆ. ಈ ವೇಳೆ ದೇವಸ್ಥಾನದ ಆಡಳಿತ ವರ್ಗದವರು, ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರೂ ಮೂಕ ಪ್ರೇಕ್ಷಕರಾಗಿದ್ದರು. ದೇವಸ್ಥಾನದ ಆಚರಣೆಯ ಹೆಸರಿನಲ್ಲಿ ದೊಂದಿ(ದೀಪ)ಗಳನ್ನು ಆನೆಗಳ ಅತೀ ಸನಿಹದಲ್ಲಿ ಹಿಡಿಯಲಾಗಿತ್ತು. ದೇವಳದ ಪ್ರಾಂಗಣದ ತುಂಬ ವಿದ್ಯುದ್ದೀಪಗಳ ಅಲಂಕಾರ ಇದ್ದರೂ ದೊಂದಿ ದೀಪಗಳನ್ನು ಬೆಳಗುವ ಮೂಲಕ ಆನೆಗಳನ್ನು ಗಲಿಬಿಲಿಗೊಳಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವಾಲಯದ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ. ಇಂತಹ ಕಾನೂನು ಬಾಹಿರ ಕ್ರಮಗಳನ್ನು ನಿಷೇಧಿಸುವಂತೆ ಕೋರಿ ಕೇಂದ್ರ ಸರಕಾರಕ್ಕೂ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.





