2,000ರೂ. ನೋಟಿನ ಕಲರ್ ಪ್ರಿಂಟ್ ತೆಗೆದು ಸಾಮಾನು ಖರೀದಿಸಿದ ಬಾಲಕಿ ಸೆರೆ

ಪುನ್ನಯೂರ್ ಕುಳಂ(ತೃಶೂರ್):2,000 ರೂ. ನೋಟಿನ ಕಲರ್ ಪ್ರಿಂಟ್ ತೆಗೆದು ಅಂಗಡಿಯಿಂದ ಸಾಮಾನು ಖರೀದಿಸಿದ ಹದಿಮೂರು ವರ್ಷ ವಯಸ್ಸಿನ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ.
ಮಂದಲಾಂಕಕುನ್ನ್‌ನ ಅಂಗಡಿಯೊಂದರಲ್ಲಿ ಬಾಲಕಿ ಮೊದಲು ನೋಟು ಕೊಟ್ಟು 500ರೂ. ಸಾಮಾನು ಖರೀದಿಸಿದ್ದಾಳೆ. ಅಂಗಡಿ ಮಾಲಕ 1500ರೂ. ಚಿಲ್ಲರೆ ಕೊಟ್ಟಿದ್ದಾನೆ. ನಂತರ ಹತ್ತಿರದ ಅಂಗಡಿಯಿಂದ ನಾಲ್ನೂರು ರೂ. ಕೊಟ್ಟು ಎರಡು ಮ್ಯಾಕ್ಸಿ ಖರೀದಿಸಿದ್ದಾಳೆ.
2,000ರೂ. ನೋಟು ಕೊಟ್ಟು ಚಿಲ್ಲರೆಯಿಲ್ಲದ್ದರಿಂದ ಹತ್ತಿರದ ಬೇಕರಿಯಿಂದ ಚಿಲ್ಲರೆ ತರಲು ಅಂಗಡಿಯ ಉದ್ಯೋಗಿ ಮಹಿಳೆ ಹೋಗಿದ್ದರು. ಬೇಕರಿಯಾತನಿಗೆ 2000ರೂ. ನೋಟಿನ ಬಗ್ಗೆ ಸಂದೇಹ ಬಂದು ಆತ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯ ಎಸ್ಸೈ ಮೋಹಿತ್‌ರ ನೇತೃತ್ವದ ಪೊಲೀಸರ ತಂಡ ನೋಟುಗಳನ್ನು ಪರಿಶೀಲಿಸಿ ಬಾಲಕಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಪೊಲೀಸರು ಪ್ರಶ್ನಿಸಿದಾಗ ಹತ್ತಿರದ ಕಂಪ್ಯೂಟರ್ ಕೇಂದ್ರದಲ್ಲಿ ಪ್ರಿಂಟ್ ತೆಗೆದು ವಸ್ತುಗಳನ್ನು ಖರೀದಿಸಿ ತರಲು ಒಬ್ಬ ವ್ಯಕ್ತಿ ಹೇಳಿದ್ದೆಂದು ಬಾಲಕಿ ತಿಳಿಸಿದ್ದಾಳೆ. ಈತನನ್ನು ಪ್ರಶ್ನಿಸಿದಾಗ ಆತ ನಿರಪರಾಧಿಯೆಂದು ಗೊತ್ತಾಗಿತ್ತು. ನಂತರ ಕೇಳಿದಾಗ ಮನೆಯ ಕಂಪ್ಯೂಟರ್‌ನಲ್ಲಿ ನೋಟು ಸ್ಕಾನ್ ಮಾಡಿ ಪ್ರಿಂಟ್ ತೆಗೆದದ್ದೆಂದು ಬಾಲಕಿ ತಿಳಿಸಿದ್ದಾಳೆಂದು ವಡಕ್ಕಕ್ಕಾಡ್ ಪೊಲೀಸರು ಹೇಳಿದ್ದಾರೆಂದು ವರದಿ ತಿಳಿಸಿದೆ.





