ನೋಟು ರದ್ದು ಪರಿಣಾಮ : ಬ್ಯಾಂಕ್ ಸರತಿ ಸಾಲಿನಲ್ಲಿ ನಿಂತ ಮಾಜಿ ಢಕಾಯಿತ

ಗ್ವಾಲಿಯರ್: ರೂ. 500 ಮತ್ತು 1000ದ ಕರೆನ್ಸಿ ನೋಟುಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಜನರೂ ನಗದು ಪಡೆಯಲು ಬ್ಯಾಂಕ್‌ಗಳ ಮುಂದೆ ಸರತಿ ಸಾಲು ನಿಲ್ಲಬೇಕಾಗಿ ಬಂದಿದೆ. ಗ್ವಾಲಿಯರ್‌ನಲ್ಲಿ ಗುರುವಾರ ಮಾಜಿ ಢಕಾಯಿತ ಮಲ್ಖಾನ್ ಸಿಂಗ್ ಕರೆನ್ಸಿ ಬದಲಿಸಿಕೊಳ್ಳಲು ಬ್ಯಾಂಕ್ ಶಾಖೆ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ. ಎಸ್‌ಬಿಐ ಶಾಖೆಯಲ್ಲಿ ಆತನ ಜೊತೆಗಿದ್ದ ಜನರು ಮಲ್ಕಾನ್ನನ್ನು ಕಂಡು ಅಚ್ಚರಿಗೊಂಡಿದ್ದರು.
70 ಮತ್ತು 80ರ ದಶಕದಲ್ಲಿ ಮಲ್ಕಾನ್ ಸಿಂಗ್ ಕುಖ್ಯಾತನಾಗಿದ್ದ. ಚಂಬಲ್ ಕಣಿವೆಯ ಅತೀ ಭಯಾನಕ ಗ್ಯಾಂಗ್‌ಗಳಲ್ಲಿ ಮಲ್ಕಾನ್ ಪಡೆಯೂ ಒಂದಾಗಿತ್ತು. ಪೊಲೀಸರು ಆತನ ವಿರುದ್ಧ 94 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದರಲ್ಲಿ 18 ಢಕಾಯಿತಿ, 28 ಅಪಹರಣ, 19 ಕೊಲೆ ಯತ್ನ ಮತ್ತು 17 ಕೊಲೆ ಕೇಸುಗಳು ಸೇರಿವೆ. ಆತ 1983ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಮುಂದೆ ಶರಣಾಗಿದ್ದ.
1976ರಲ್ಲಿ ಬಿಲಾವೋ ಗ್ರಾಮದ ಸರಪಂಚ್ ಕೈಲಾಶ್ ನಾರಾಯಣ್ ನಡುವಿನ ರಕ್ತಪಾತದ ಬಳಿಕ ಮಲ್ಖಾನ್ ಕುಖ್ಯಾತಿ ಹೊಂದಿದ್ದ. ನಾರಾಯಣ್‌ರನ್ನು ಗುಂಡಿಕ್ಕಿ ಕೊಲ್ಲಲು ಯತ್ನಿಸಿ ಮಲ್ಕಾನ್ ವಿಫಲನಾಗಿದ್ದ. ನಾರಾಯಣ್ ಅನುಯಾಯಿಗಳಲ್ಲಿ ಒಬ್ಬನನ್ನು ಕೊಂದು ಇಬ್ಬರಿಗೆ ಗಾಯಗೊಳಿಸಿ ಪಲಾಯನಗೈದಿದ್ದ. ಆರು ಗುಂಡುಗಳು ತಗಲಿಯೂ ನಾರಾಯಣ್ ಬಚಾವಾಗಿದ್ದರು. ನಂತರ ಉತ್ತರ ಪ್ರದೇಶದ ಜಲಾವುನ್‌ಗೆ ಪರಾರಿಯಾದ ಮಲ್ಕಾನ್ ಬುಂದೇಲ್ಕಂಡ್ ಪ್ರಾಂತ್ಯದಲ್ಲಿ ಕುಖ್ಯಾತನಾದ. ಇತ್ತೀಚೆಗೆ ನಟ ನಿರ್ದೇಶಕ ಮುಖೇಶ್ ಆರ್ ಚೌಸ್ಕೀ ಮಲ್ಕಾನ್ ಜೀವನಚರಿತ್ರೆ ಚಿತ್ರೀಕರಿಸಿದ ಕಾರಣ ಮತ್ತೆ ಸುದ್ದಿಯಲ್ಲಿದ್ದ. ಶರಣಾದ ಮೇಲೆ ಮಲ್ಕಾನ್ ತನ್ನ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಾ ಶಾಂತಿಯುತ ಜೀವನ ನಡೆಸುತ್ತಿದ್ದಾನೆ. ಆಗಾಗ್ಗೆ ಧಾರ್ಮಿಕ ಸಮಾರಂಭಗಳಲ್ಲೂ ಭಾಗವಹಿಸುತ್ತಾನೆ.
ಕೃಪೆ: www.news18.com







