ದಾಂಪತ್ಯದ ಮೂರನೇ ಇನ್ನಿಂಗ್ಸ್ಗೆ ಇಮ್ರಾನ್ ಖಾನ್ ಸಜ್ಜು?
ಮಾಜಿ ಪಾಕಿಸ್ತಾನಿ ಕ್ರಿಕೆಟರ್ ಮತ್ತು ರಾಜಕಾರಣಿ ಇಮ್ರಾನ್ ಖಾನ್ ಮೂರನೇ ಮದುವೆಯಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಬ್ರಿಟನ್ಗೆ ಭೇಟಿ ನೀಡಿದ ತೆಹ್ರೀಕೆ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ತಮಗೆ ಮದುವೆಯಲ್ಲಿ ಉತ್ತಮ ಅನುಭವವಾಗಿಲ್ಲ ಎಂದಿದ್ದಾರೆ.
"ನಾನು ಮದುವೆ ಬಗ್ಗೆ ಉತ್ತಮ ಸಲಹೆ ನೀಡಲಾರೆ. ಏಕೆಂದರೆ ನನ್ನ ಅನುಭವ ಚೆನ್ನಾಗಿಲ್ಲ. ಮೂರನೇ ಬಾರಿ ಅದೃಷ್ಟ ಖುಲಾಯಿಸಬಹುದೇನೋ"ಎಂದಿದ್ದಾರೆ. ಲಂಡನ್ನಲ್ಲಿ ಅವರು ಮೂರನೇ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಪ್ರಚಾರ ಪಡೆದಿತ್ತು. ಆದರೆ ನಂತರ ಅದು ಸುಳ್ಳಾಯಿತು. ಅವರ ಮಾಜಿ ಪತ್ನಿ ರೆಹಂ ಖಾನ್ ತಮ್ಮಿಬ್ಬರ ದಾರಿ ಬೇರ್ಪಟ್ಟಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇಮ್ರಾನ್ ಮೂರನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ ರೆಹಂ, "ಮೂರನೇ ಬಾರಿ ಅವರ ಅನುಭವ ಚೆನ್ನಾಗಿರಬಹುದೇನೋ" ಎಂದಿದ್ದಾರೆ. ಆದರೆ ತಾವು ತಮ್ಮ ದಾರಿಯನ್ನು ಇಮ್ರಾನ್ಗಾಗಿ ಬದಲಿಸುವುದಿಲ್ಲ ಎಂದೂ ಹೇಳಿದ್ದಾರೆ. ಇಮ್ರಾನ್ ಖಾನ್ ಹೆಸರು ಪನಾಮ ಗೇಟ್ನಲ್ಲಿ ಕೇಳಿ ಬಂದಿರುವ ಬಗ್ಗೆ ಮಾತನಾಡಿದ ಅವರು, "ದೇಶದಲ್ಲಿ ಪನಾಮ ಲೀಕ್ಸ್ ಮಾತ್ರ ಸುದ್ದಿಯಲ್ಲ. ಪೇಶಾವರದ ಜನರಿಗೆ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ" ಎಂದಿದ್ದಾರೆ.
ಇಮ್ರಾನ್ರ ಪ್ರಥಮ ವಿವಾಹ ಬ್ರಿಟಿಷ್ ಮೂಲದ ಜೆಮಿಮಾ ಜೊತೆಗೆ ಆಗಿತ್ತು. ಅವರು ಮದುವೆಯ ನಂತರ ಇಸ್ಲಾಂಗೆ ಪರಿವರ್ತನೆಯನ್ನೂ ಹೊಂದಿದ್ದರು.
ಕೃಪೆ:khaleejtimes.com