ಕ್ಯಾಲಿಕಟ್ ವಿಮಾನ ನಿಲ್ದಾಣ ಎಪ್ರಿಲ್‌ನಲ್ಲಿ ಪೂರ್ಣ

ಕರಿಪ್ಪುರ್, ನ. 20: ಹೆಚ್ಚಿನ ಸೌಲಭ್ಯಗಳು, ಹೆಚ್ಚಿನ ವಿಮಾನ ಸರ್ವಿಸ್ ಗಳೊಂದಿಗೆ ಕೋಝಿಕ್ಕೋಡ್ ವಿಮಾನ ನಿಲ್ದಾಣ ಎಪ್ರಿಲ್‌ನಲ್ಲಿ ಪೂರ್ಣರೂಪದಲ್ಲಿ ಕಾರ್ಯಾರಂಭಿಸಲಿದೆ ಎಂದು ವರದಿಯಾಗಿದೆ. ಮೂವತ್ತು ಕೋಟಿ ರೂಪಾಯಿ ಖರ್ಚಿನಲ್ಲಿ ನವೀಕರಣಗೊಂಡಿರುವ ವಿಮಾನನಿಲ್ದಾಣದ ರನ್‌ವೇ,85.5ಕೋಟಿ ರೂಪಾಯಿ ಖರ್ಚಿನಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಅಂತಾರಾಷ್ಟ್ರೀಯ ಟರ್ಮಿನಲ್ ಕೆಲಸ ಎಪ್ರಿಲ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಅದೇವೇಳೆ ಎಪ್ರಿಲ್‌ನಲ್ಲಿ ಆರಂಭವಾಗುವ ಬೇಸಿಗೆಯ ಶೆಡ್ಯೂಲ್‌ನಲ್ಲಿ ಹೆಚ್ಚು ಸರ್ವಿಸ್‌ಗಳನ್ನು ನಡೆಸಲಿಕ್ಕಾಗಿ ವಿವಿಧ ವಿಮಾನ ಕಂಪೆನಿಗಳು ಪ್ರಯತ್ನ ಆರಂಭಿಸಿವೆ. ಜೆಟ್‌ಏರ್, ಸ್ಪೈಸ್ ಜೆಟ್, ಇತ್ತಿಹಾದ್ ಏರ್‌ವೇಸ್ ಇವುಗಳು ಹೊಸ ಸರ್ವಿಸ್ ನಡೆಸಲು ಮುಂದೆ ಬಂದಿವೆ.
ದುಬೈ, ಅಬುಧಾಬಿ, ಶಾರ್ಜಗಳಿಗೆ ಹಾರಾಟ ನಡೆಸಲು ಜೆಟ್ ಏರ್ ಆದ್ಯತೆ ನೀಡಿದೆ. ಈಗ ದುಬೈ, ಶಾರ್ಜಕ್ಕೆ ಇದುಸರ್ವಿಸ್ ನಡೆಸುತ್ತಿದೆ. ಹೊಸದಾಗಿ ಖರೀದಿಸುವ ವಿಮಾನಗಳಲ್ಲಿ ಹೆಚ್ಚಿನವುಗಳನ್ನು ಕೋಝಿಕ್ಕೋಡ್‌ನಿಂದ ನಡೆಸುವ ಯಾನಕ್ಕಾಗಿ ಮೀಸಲಿಡಲು ಜೆಟ್ ಏರ್ ನಿರ್ಧರಿಸಿದೆ ಎಂದು ವರದಿತಿಳಿಸಿದೆ.





