ಸೌದಿ ಅರೇಬಿಯಾದಲ್ಲಿ ಬಾಲಕಿಯ ಮೇಲೆ ಹುಲಿ ದಾಳಿ

ಮನಾಮ, ನ.20: ಪ್ರಾಣಿಗಳೊಂದಿಗಿನ ಮನರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಕಿಯ ಮೇಲೆ ಹುಲಿಯೊಂದು ದಾಳಿಗೆ ಯತ್ನಿಸಿದ ಘಟನೆ ಸೌದಿ ಅರೇಬಿಯದಲ್ಲಿ ನಡೆದಿದೆ.
ಹುಲಿಯೊಂದು ಬಾಲಕಿಯ ಮೇಲೆ ದಾಳಿ ನಡೆಸಿದ ದೃಶ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬರು ಸೆರೆ ಹಿಡಿದಿದ್ದಾರೆ. ಸೌದಿ ಅರೇಬಿಯದ ವಾಯುವ್ಯ ಭಾಗದ ಸಕಾಕ ಮಾರುಕಟ್ಟೆ ಬಳಿಯ ಬಯಲು ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಪ್ರಾಣಿಗಳಿರುವ ಮನರಂಜನೆ ಕಾರ್ಯಕ್ರಮದ ಭಾಗವಾಗಿ ಪಳಗಿದ ಹುಲಿಯೊಂದನ್ನು ತರಬೇತುದಾರ ಎಲ್ಲರಿಗೂ ತೋರಿಸುತ್ತಿದ್ದ ಸಮಯದಲ್ಲಿ ಹುಲಿ ಬಾಲಕಿಯ ಮೇಲೆ ಎರಗಲು ಮುಂದಾಗಿದೆ. ತಕ್ಷಣವೇ ಎಚ್ಚೆತ್ತ ತರಬೇತುದಾರ ಬಾಲಕಿಯನ್ನು ಅಪಾಯದಿಂದ ರಕ್ಷಿಸಿದ. ಹುಲಿ ದಾಳಿಯಿಂದ ಬೆಚ್ಚಿಬಿದ್ದ ಬಾಲಕಿ ಅಳಲಾರಂಭಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದಾರೆ.
ಮಕ್ಕಳಿಗೆ ಹುಲಿಯ ದರ್ಶನ ಮಾಡುವ ವೇಳೆ ಬೇಲಿ ಸಹಿತ ಯಾವುದೇ ಭದ್ರತಾ ಸುರಕ್ಷತೆ ಅಳವಡಿಸಿಕೊಳ್ಳದಿರುವುದಕ್ಕೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪಳಗಿದ ಹುಲಿಯಾದರೂ ಬಾಲಕಿ ಹಾಗೂ ಇತರ ಪ್ರೇಕ್ಷಕರಿಗೆ ಮಾರಕವಾಗುವ ಅಪಾಯಕಾರಿ ಪರಿಸ್ಥಿತಿ ಅದಾಗಿತ್ತು. ಹುಲಿಯೊಂದು ಕಾಡುಪ್ರಾಣಿ. ದಾಳಿ ಮಾಡುವುದು ಅದರ ಹುಟ್ಟುಗುಣ. ಅದನ್ನು ಎಷ್ಟೇ ಸಮಯ ಪಳಗಿಸಿದರೂ ಅದು ಬದಲಾಗುವುದಿಲ್ಲ. ಕೊಲ್ಲುವ ಗುಣ ಅದರಲ್ಲಿರುತ್ತದೆ. ಗರಿಷ್ಠ ಸುರಕ್ಷತೆ ಖಾತ್ರಿಪಡಿಸಲು ಎಲ್ಲ ಅಗತ್ಯದ ಕ್ರಮ ಕೈಗೊಳ್ಳಬೇಕಾಗಿತ್ತು. ಕೆಲವು ಜನರು ಕಾಡು ಪ್ರಾಣಿಗಳನ್ನು ಅಪಾಯರಹಿತ ಪ್ರಾಣಿಯಾಗಿ ಕಾಣುತ್ತಾರೆ ಎಂದು ಸೌದಿ ನ್ಯೂಸ್‌ಗೆ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
2013ರ ನವೆಂಬರ್‌ನಲ್ಲಿ ಕತರ್‌ನ ಐದು ವರ್ಷದ ಬಾಲಕನ ಮೇಲೆ ಮರಿ ಚಿರತೆಯೊಂದು ದಾಳಿ ನಡೆಸಿದ್ದು, ಇದರಿಂದ ಬಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು.







