ನಜೀಬ್‌ಗೆ ಎಬಿವಿಪಿ ಕಾರ್ಯಕರ್ತ ಹಲ್ಲೆ ನಡೆಸಿದ್ದು ತನಿಖೆಯಿಂದ ಸಾಬೀತು
ಜೆಎನ್‌ಯು ವಿದ್ಯಾರ್ಥಿ ನಾಪತ್ತೆ ಪ್ರಕರಣ

ಹೊಸದಿಲ್ಲಿ,ನ.20: ಅ.15ರಿಂದ ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಮೇಲೆ ಎಬಿವಿಪಿ ಸದಸ್ಯ ವಿಕ್ರಾಂತ್ ಕುಮಾರ್ ಹಲ್ಲೆ ನಡೆಸಿದ್ದ ಎನ್ನುವುದು ವಿವಿ ಶಿಸ್ತುಪಾಲಕರ ತನಿಖೆಯಿಂದ ಸಾಬೀತಾಗಿದೆ.
ವಿವಿಯ ಸ್ಕೂಲ್ ಆಫ್ ಬಯೋಟೆಕ್ನಾಲಜಿಯ ವಿದ್ಯಾರ್ಥಿ,ಉತ್ತರ ಪ್ರದೇಶದ ಬದಾಯುನ್ ನಿವಾಸಿ ನಜೀಬ್(27) ಮತ್ತು ವಿಕ್ರಾಂತ್ ಸೇರಿದಂತೆ ಎಬಿವಿಪಿ ಕಾರ್ಯಕರ್ತರ ನಡುವೆ ಅ.14ರಂದು ರಾತ್ರಿ ಹಾಸ್ಟೆಲ್‌ನಲ್ಲಿ ಹೊಯ್‌ಕೈ ನಡೆದಿದ್ದು, ಮರುದಿನದಿಂದ ನಜೀಬ್ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಘಟನೆಯ ಬಗ್ಗೆ ತನಿಖೆಗೆ ಜೆಎನ್‌ಯು ಆದೇಶಿಸಿತ್ತು.
ಅ.16ರಂದು ವಿಕ್ರಾಂತ್ ನಜೀಬ್ ಜೊತೆ ಜಗಳ ತೆಗೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ ಎನ್ನುವುದು ತನಿಖೆಯಲ್ಲಿ ಸಾಬೀತಾಗಿದೆ. ಇದು ಅಶಿಸ್ತಿನ ಕೃತ್ಯ ಮತ್ತು ದುರ್ನಡತೆಯಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಿರುವ ವಿವಿ,ಈ ಬಗ್ಗೆ ವಿಕ್ರಾಂತ್ ವಿರುದ್ಧ ಶಿಸ್ತುಕ್ರಮವನ್ನೇಕೆ ಜರುಗಿಸಬಾರದು ಎನ್ನುವುದಕ್ಕೆ ಕಾರಣ ಕೇಳಿ ನೋಟಿಸ್‌ನ್ನು ಜಾರಿಗೊಳಿಸಿದೆ.
ತನ್ಮಧ್ಯೆ ವಿಕ್ರಾಂತ್ ಬೆಂಬಲಕ್ಕೆ ಧಾವಿಸಿರುವ ಎಬಿವಿಪಿಯು,ವಿವಿ ಆಡಳಿತದ ತನಿಖೆಯು ಪಕ್ಷಪಾತದಿಂದ ಕೂಡಿದೆ ಎಂದು ಆಪಾದಿಸಿದೆ.
ನಾಪತ್ತೆಯಾಗಿರುವ ನಜೀಬ್ ನನ್ನು ಪತ್ತೆ ಹಚ್ಚುವಲ್ಲಿ ವಿವಿ ಆಡಳಿತ ಮತ್ತು ದಿಲ್ಲಿ ಪೊಲೀಸರ ವೈಫಲ್ಯದ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿಭಟನೆ ನಡೆಸುತ್ತಿದ್ದಾರೆ.







