ಸಿಂಧು ಮುಡಿಗೆ ಚೊಚ್ಚಲ ಸೂಪರ್ ಸಿರೀಸ್ ಕಿರೀಟ

ಫುಝೌ, ನ.20: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೊಚ್ಚಲ ಸೂಪರ್ ಸಿರೀಸ್ ಪ್ರೀಮಿಯರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ರವಿವಾರ ಇಲ್ಲಿ ನಡೆದ 700,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸಿಂಧು ಚೀನಾದ ಸನ್ ಯೂ ಅವರನ್ನು 21-11, 17-21, 21-11 ಗೇಮ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.
ವಿಶ್ವದ 11ನೆ ರ್ಯಾಂಕಿನ ಆಟಗಾರ್ತಿ ಸಿಂಧು ಫೈನಲ್ ಪಂದ್ಯಕ್ಕೆ ಮೊದಲು ಸನ್ ವಿರುದ್ಧ ಆಡಿರುವ 5 ಪಂದ್ಯಗಳ ಪೈಕಿ 3ರಲ್ಲಿ ಸೋತಿದ್ದರು. ಆದರೆ, ಇಲ್ಲಿನ ಹೈಕ್ಸಿಯಾ ಒಲಿಂಪಿಕ್ಸ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಒಂದು ಗಂಟೆ ಹಾಗೂ 9 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಂಧು ಹಿಂದಿನ ದಾಖಲೆಯನ್ನು ಬುಡಮೇಲು ಮಾಡಿದರು.
ಅತ್ಯಂತ ವೇಗವಾಗಿ ಆಡಿದ ಸಿಂಧು ಆರಂಭದಲ್ಲೇ 11-5 ಮುನ್ನಡೆ ಸಾಧಿಸಿ ಚೀನಾದ ಆಟಗಾರ್ತಿಗೆ ಒತ್ತಡ ಹೇರಲು ಯಶಸ್ವಿಯಾದರು. ಸಿಂಧು ಮೊದಲ ಗೇಮ್‌ನ್ನು 21-11 ರಿಂದ ಗೆದ್ದುಕೊಂಡರು. ಎರಡನೆ ಗೇಮ್‌ನಲ್ಲಿ ತಿರುಗೇಟು ನೀಡಿದ ಸನ್ 21-17 ಅಂತರದಿಂದ ಜಯಶಾಲಿಯಾದರು. ಮೂರನೆ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದ ಸಿಂಧು 21-11 ರಿಂದ ಪಂದ್ಯವನ್ನು ಗೆದ್ದುಕೊಂಡರು.
ಸಿಂಧು ಚೀನಾ ಓಪನ್ ಪ್ರಶಸ್ತಿಯನ್ನು ಜಯಿಸಿದ ಭಾರತದ ಎರಡನೆ ಆಟಗಾರ್ತಿಯಾಗಿದ್ದಾರೆ. ಸೈನಾ ನೆಹ್ವಾಲ್ 2014ರಲ್ಲಿ ಚೀನಾ ಓಪನ್ ಪ್ರಶಸ್ತಿ ಜಯಿಸಿದ್ದರು. ಆದರೆ, ಕಳೆದ ವರ್ಷ ರನ್ನರ್-ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು.
ಸಿಂಧು ಕಳೆದ ವರ್ಷ ಡೆನ್ಮಾರ್ಕ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ, ಫೈನಲ್‌ನಲ್ಲಿ 2012ರ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲೂ ಕ್ಸುರುಯಿ ವಿರುದ್ಧ ನೇರ ಗೇಮ್‌ಗಳಿಂದ ಶರಣಾಗಿ ಚೊಚ್ಚಲ ಸೂಪರ್ ಸರಣಿ ಪ್ರಶಸ್ತಿ ಗೆಲ್ಲುವುದರಿಂದ ವಂಚಿತರಾಗಿದ್ದರು.
ಸಿಂಧು ಈ ವರ್ಷದ ಆಗಸ್ಟ್‌ನಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಇತಿಹಾಸ ನಿರ್ಮಿಸಿದ ಬಳಿಕ ಚೀನಾದಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದಾರೆ.







