ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾರಂಭಕ್ಕೆ ರಿಸರ್ವ್ ಬ್ಯಾಂಕ್ ನಿಂದ ಮಹತ್ವದ ಹೆಜ್ಜೆ
ನನಸಾಗುವತ್ತ ಬಡ್ಡಿ ರಹಿತ ಆರ್ಥಿಕ ವ್ಯವಸ್ಥೆಯ ಕನಸು

ಹೊಸದಿಲ್ಲಿ,ನ.20: ದೇಶದಲ್ಲಿ ಶರಿಯಾಕ್ಕೆ ಅನುಗುಣವಾಗಿ ಬಡ್ಡಿಮುಕ್ತ ಬ್ಯಾಂಕಿಂಗ್‌ನ್ನು ಹಂತಹಂತವಾಗಿ ಪರಿಚಯಿಸಲು ಸಾಂಪ್ರದಾಯಿಕ ಬ್ಯಾಂಕುಗಳಲ್ಲಿ ‘ಇಸ್ಲಾಮಿಕ್ ಗವಾಕ್ಷಿ ’ಯನ್ನು ಪ್ರಾರಂಭಿಸುವ ಪ್ರಸ್ತಾವನೆಯೊಂದನ್ನು ಭಾರತೀಯ ರಿಜರ್ವ್ ಬ್ಯಾಂಕ್ ಹೊಂದಿದೆ.
ಧಾರ್ಮಿಕ ಕಾರಣಗಳಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದಿರುವ ಸಮಾಜದ ವರ್ಗಗಳ ಆರ್ಥಿಕ ಸೇರ್ಪಡೆಯನ್ನು ಖಚಿತಪಡಿಸಲು ಇಸ್ಲಾಮಿಕ್ ಬ್ಯಾಂಕಿಂಗ್‌ನ್ನು ಆರಂಭಿಸುವ ಸಾಧ್ಯತೆಯನ್ನು ಕೇಂದ್ರ ಮತ್ತು ಆರ್‌ಬಿಐ ಬಹುಸಮಯದಿಂದ ಪರಿಶೀಲಿಸುತ್ತಿದ್ದವು.
ಇಸ್ಲಾಮಿಕ್ ಹಣಕಾಸಿನ ಸಂಕೀರ್ಣತೆಗಳು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ನಿಯಂತ್ರಣ ಹಾಗೂ ಉಸ್ತುವಾರಿ ಸವಾಲುಗಳನ್ನು ಪರಿಗಣಿಸಿ,ಜೊತೆಗೆ ಭಾರತೀಯ ಬ್ಯಾಂಕುಗಳು ಈ ಕ್ಷೇತ್ರದಲ್ಲಿ ಅನುಭವ ಹೊಂದಿಲ್ಲವಾದ್ದರಿಂದ ದೇಶದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್‌ನ್ನು ಹಂತಹಂತವಾಗಿ ಜಾರಿಗೊಳಿಸಬಹುದು ಎನ್ನುವುದು ನಮ್ಮ ಖಚಿತ ಅಭಿಪ್ರಾಯವಾಗಿದೆ. ಆರಂಭದಲ್ಲಿ ಸರಕಾರದಿಂದ ಅಗತ್ಯ ಅಧಿಸೂಚನೆ ಹೊರಬಿದ್ದ ಬಳಿಕ ಸಾಂಪ್ರದಾಯಕ ಬ್ಯಾಂಕುಗಳಲ್ಲಿರುವ ಹಣಕಾಸು ಯೋಜನೆಗಳಂತಹ ಕೆಲವು ಸರಳ ಉತ್ಪನ್ನಗಳನ್ನು ಇಸ್ಲಾಮಿಕ್ ಗವಾಕ್ಷಿಯ ಮೂಲಕ ಪರಿಚಯಿಸುವುದನ್ನು ಪರಿಗಣಿಸಬಹುದಾಗಿದೆ. ಕಾಲಕ್ರಮೇಣ ಅನುಭವದ ಆಧಾರದಲ್ಲಿ ನಂತರದ ಹಂತದಲ್ಲಿ ಲಾಭ-ನಷ್ಟ ಹಂಚಿಕೆಯ ಸಂಕೀರ್ಣ ಉತ್ಪನ್ನಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್‌ನ್ನು ಆರಂಭಿಸಬಹುದಾಗಿದೆ ಎಂದು ಆರ್‌ಬಿಐ ಪತ್ರವೊಂದರಲ್ಲಿ ವಿತ್ತ ಸಚಿವಾಲಯಕ್ಕೆ ತಿಳಿಸಿದೆ. ಸುದ್ದಿಸಂಸ್ಥೆಯು ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ಈ ಪತ್ರದ ಪ್ರತಿಯು ಲಭ್ಯವಾಗಿದೆ.
ಇಸ್ಲಾಮ್ ಧರ್ಮದಲ್ಲಿ ಬಡ್ಡಿಯನ್ನು ನಿಷೇಧಿಸಲಾಗಿದ್ದು, ಇಸ್ಲಾಮಿಕ್ ಅಥವಾ ಶರಿಯಾ ಬ್ಯಾಂಕಿಂಗ್ ಬಡ್ಡಿಯನ್ನು ವಿಧಿಸದಿರುವ ನೀತಿಗಳನ್ನು ಆಧರಿಸಿರುವ ಹಣಕಾಸು ವ್ಯವಸ್ಥೆಯಾಗಿದೆ.
ಆರ್ಥಿಕ ಸೇರ್ಪಡೆಗೆ ಆಸ್ತಿ ಮತ್ತು ಬಾಧ್ಯತೆ ಈ ಎರಡೂ ವಿಭಾಗಗಳಲ್ಲಿ ಬಡ್ಡಿಮುಕ್ತ ಬ್ಯಾಂಕಿಂಗ್‌ಗೆ ಶರಿಯಾಕ್ಕೆ ಅನುಗುಣವಾಗಿದೆಯೆಂಬ ಪ್ರಮಾಣೀಕೃತ ಉತ್ಪನ್ನಗಳು ಅಗತ್ಯವಾಗಿವೆ ಹಾಗೂ ಬಡ್ಡಿಮುಕ್ತ ಬ್ಯಾಂಕಿಂಗ್‌ನಡಿ ಸಂಗ್ರಹಿತ ಹಣವನ್ನು ಇತರ ಹಣದೊಂದಿಗೆ ಸೇರಿಸುವಂತಿಲ್ಲ,ಹೀಗಾಗಿ ಪ್ರತ್ಯೇಕ ಗವಾಕ್ಷಿಯಡಿ ಈ ಬ್ಯಾಂಕಿಂಗ್‌ನ್ನು ನಿರ್ವಹಿಸಬೇಕಾಗುತ್ತದೆ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದೂ ಆರ್‌ಬಿಐ ಪತ್ರವು ತಿಳಿಸಿದೆ.
ಆರ್‌ಬಿಐ ಪ್ರಸ್ತಾವನೆಯು ಅಂತರ್ ಇಲಾಖಾ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್‌ನ್ನು ಪರಿಚಯಿಸುವ ಸಾಧ್ಯಾಸಾಧ್ಯತೆಗಳಿಗೆ ಸಂಬಂಧಿಸಿದಂತೆ ನಡೆಸಲಾದ ಕಾನೂನಾತ್ಮಕ,ತಾಂತ್ರಿಕ ಮತ್ತು ನಿಯಂತ್ರಣ ವಿಷಯಗಳ ಪರಿಶೀಲನೆಯನ್ನು ಆಧರಿಸಿದೆ.
ಆರ್‌ಬಿಐ ತಾಂತ್ರಿಕ ವಿಶ್ಲೇಷಣೆ ವರದಿಯೊಂದನ್ನೂ ಸಿದ್ಧಪಡಿಸಿದ್ದು, ಅದನ್ನು ವಿತ್ತ ಸಚಿವಾಲಯದ ಪರಿಶೀಲನೆಗೆ ಕಳುಹಿಸಲಾಗಿದೆ.
ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಉತ್ಪನ್ನಗಳನ್ನು ಪರಿಚಯಿಸಲು ನಿರ್ಧರಿಸಿದ ಪಕ್ಷದಲ್ಲಿ ಅದಕ್ಕಾಗಿ ಆರ್‌ಬಿಐ ನಿರ್ವಹಣೆ ಮತ್ತು ನಿಯಂತ್ರಣ ಮಾರ್ಗಸೂಚಿಯನ್ನು ರೂಪಿಸುವುದು ಅಗತ್ಯವಾಗುತ್ತದೆ ಎಂದೂ ಪತ್ರವು ತಿಳಿಸಿದೆ.







