ನೋಟು ರದ್ದು : ಪ್ರಧಾನಿಯವರ ಉಪಕ್ರಮವು ಶ್ರೀಮಂತರು ಮತ್ತು ಬಡವರ ನಡುವಿನ ಅಸಮಾನತೆ ನಿವಾರಣೆಗೆ ಸೂಕ್ತ ನಡೆ

ನವೆಂಬರ್ 8,2016 ದೇಶದ ಚರಿತ್ರೆಯಲ್ಲಿ ಅತ್ಯಂತ ಕ್ರಾಂತಿಕಾರಿ ಆರ್ಥಿಕ ಬದಲಾವಣೆಗೆ ಮುನ್ನುಡಿ ಹಾಡಿದ, ಸ್ಥಿತ್ಯಂತರಕ್ಕೆ ಕಾರಣವಾದ ದಿನವೆಂದು ಇತಿಹಾಸದಲ್ಲಿ ದಾಖಲಾಗಲಿದೆ. ಜನರಿಗೆ ಹೆಚ್ಚು ಸಮಸ್ಯೆಯಾಗದಂತೆ ಈ ಬದಲಾವಣೆ ಸಾಧ್ಯವಾಯಿತು ಎಂದು ಉಪಕ್ರಮ ಶುರುವಾದ 10 ದಿನಗಳ ಬಳಿಕ ಹೇಳಬಹುದಾಗಿದೆ. ಬ್ಯಾಂಕ್, ಎಟಿಎಂ ಮತ್ತು ಅಂಚೆ ಕಚೇರಿಗಳ ಎದುರು ಸರದಿ ಸಾಲು ಇದೆ ನಿಜ. ಗ್ರಾಮೀಣ ಭಾರತ ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಬದಲಾವಣೆಗೆ ಹೊಂದಿಕೊಳ್ಳಲು ಸ್ವಲ್ಪ ಕಾಲ ಬೇಕಾಗುತ್ತದೆ ಮತ್ತು ಸಗಟು ಮಾರಾಟ ಕ್ಷೇತ್ರದಲ್ಲಿ ತಾತ್ಕಾಲಿಕವಾಗಿ ಬೇಡಿಕೆ ಕುಸಿಯಲಿದೆ ಎಂಬುದೂ ನಿಜ.
ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಮಂದಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿರುವ, ದುಡಿದ ಹಣವನ್ನು ಬ್ಯಾಂಕ್ ನಲ್ಲಿಡಲು ಹಿಂದೆಮುಂದೆ ನೋಡುವ ದೇಶದಲ್ಲಿ ಯಾರಿಗೂ ತಿಳಿಯದಂತೆ ಅತ್ಯಂತ ರಹಸ್ಯವಾಗಿ ಮತ್ತು ತಕ್ಷಣ ನಡೆದ, ಚಲಾವಣೆಯಲ್ಲಿರುವ ಶೇ.86ರಷ್ಟು ಕರೆನ್ಸಿಯನ್ನು ಒಂದೇ ಹೊಡೆ ತದಲ್ಲಿ ರದ್ದುಗೊಳಿಸಿದ ಈ ಉಪಕ್ರಮವು ಅತ್ಯಂತ ಕ್ರಾಂತಿಕಾರಿ ನಡೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಾಲ್ತಿಯಲ್ಲಿದ್ದ 14.9 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ನೋಟುಗಳಲ್ಲಿ ಶೇ.70 ರಷ್ಟು ಕಪ್ಪು ಹಣವಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೆ ಈ ರಾಷ್ಟ್ರೀಯ ಸಂಪತ್ತನ್ನು ಮುಚ್ಚಿಡಲಾಗಿತ್ತು. ಬಡವರು ಬವಣೆಗೆ ಸಿಲುಕಿದ್ದಾರೆ ಎಂಬ ನೆಪದಲ್ಲಿ ಈ ನಡೆಯನ್ನು ವಿರೋಧಿಸುತ್ತಿರುವವರಿಗೆ ನೋಟು ರದ್ದು ವಿರುದ್ಧ ಸಮಗ್ರ ಹಾಗೂ ಸ್ಪಷ್ಟವಾದ ವಾದವೊಂದನ್ನು ಮಂಡಿಸಲು ಸಾಧ್ಯವಾಗಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಕಪ್ಪು ಹಣ ಭ್ರಷ್ಟಾಚಾರದ ಮೂಲ ಎಂಬುದನ್ನು ಅಂಗೀಕರಿಸುತ್ತಾರೆ. ಅದು ಅಸಮಾನತೆಗೆ ದಾರಿ ಮಾಡಿಕೊಡುತ್ತದೆ, ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಹಾಗೂ ದೇಶದ ಕರೆನ್ಸಿಯ ಅಪಮೌಲ್ಯಕ್ಕೆ ಕಾರಣವಾಗುತ್ತದೆ. ಜತೆಗೆ, ಉಗ್ರವಾದ, ಅಪರಾಧಕ್ಕೆ ಬೆಂಬಲ ಮತ್ತು ದೇಶದ ಭದ್ರತೆಗೆ ಅಪಾಯ ತಂದೊಡ್ಡಬಲ್ಲ ನಕಲಿ ನೋಟುಗಳ ಸಮಸ್ಯೆಯೂ ಇದೆ. ಕಪ್ಪು ಹಣದಷ್ಟೇ ಪ್ರಮಾಣದಲ್ಲಿ ನಕಲಿ ನೋಟುಗಳೂ ಇವೆ ಎಂದು ಎಲ್ಲರೂ ಒಪ್ಪುತ್ತಾರೆ. ಕಳೆದ 10 ದಿನದಿಂದ ಕಾಶ್ಮೀರ ಕಣಿವೆ ಶಾಂತವಾಗಿದ್ದು,ಶಾಲೆಗಳಲ್ಲಿ ಶೇ.100 ರಷ್ಟು ಹಾಜರಿ ಇರುವುದು ಹಾಗೂ ಮಾವೋವಾದಿಗಳು ಸಂಗ್ರಹಿಸಿದ್ದ ನೋಟು ರದ್ದಿ ಕಾಗದವಾಗಿ ಬದಲಾಗಿರುವುದು, ನೋಟು ರದ್ದು ಉಪಕ್ರಮಕ್ಕೆ ಬೆಂಬಲ ನೀಡಿದೆ.
ಆರ್ ಬಿಐ ನ ಹಿಂದಿನ ಗವರ್ನರ್ ಗಳಾದ ಕೆ ಸುಬ್ಬರಾವ್, ರಂಗರಾಜನ್,ಡಾ ಮೇಘನಾದ ದೇಸಾಯಿ ಮತ್ತು ಡಾ ಸುರ್ಜಿತ್ ಭಲ್ಲಾ ಸೇರಿದಂತೆ ಬಹುತೇಕ ಅರ್ಥಶಾಸ್ತ್ರಜ್ಞರು ಇದೊಂದು ಬಹಳ ಹಿಂದೆಯೇ ನಡೆಯಬೇಕಿದ್ದ ಧೈರ್ಯದ ಕೆಲಸ ಎಂದು ಬಣ್ಣಿಸಿದ್ದಾರೆ. ದೂರದ ಗ್ರಾಮೀಣ ಪ್ರದೇಶಗಳಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆಯಡಿ ಬಾರದ ಬಡವರು ಇದರಿಂದ ಬವಣೆಗೆ ಸಿಲುಕಿದ್ದಾರೆ ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂ ಸರಕಾರ ದಶ ಲಕ್ಷಕ್ಕೂ ಹೆಚ್ಚು ಟೀ ತೋಟದ ಕಾರ್ಮಿಕರ ಸಮಸ್ಯೆಯನ್ನು ಬಗೆ ಹರಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಟೀ ತೋಟದ ಕಾರ್ಮಿಕರಲ್ಲಿ ಬಹುತೇಕರಿಗೆ ಬ್ಯಾಂಕ್ ಖಾತೆ ಎಂದರೆ ಅಲರ್ಜಿ. ಸಾವಿರಾರು ಮೈಲಿ ವ್ಯಾಪ್ತಿಯಲ್ಲಿ ಹರಡಿರುವ ಈ ತೋಟಗಳಲ್ಲಿ 4 ದಶ ಲಕ್ಷ ಕಾರ್ಮಿಕರಿದ್ದು, ಇವರು ಶತಮಾನಗಳಿಂದಲೂ ನಗದು ರೂಪದಲ್ಲಿ ವಾರದ ವೇತನ ಪಡೆಯುತ್ತಿದ್ದಾರೆ. ಪ್ರಧಾನಿ ನೋಟು ರದ್ದು ಘೋಷಣೆ ಮಾಡಿ, ನಗದಿನ ಮೇಲೆ ನಿರ್ಬಂಧ ಹೇರಿದಾಗ ನಮಗೆ ಟೀ ತೋಟದ ಕಾರ್ಮಿಕರಿಗೆ ಹೇಗೆ ಸಂಬಳ ನೀಡುವುದು ಎಂಬುದೇ ದೊಡ್ಡ ತಲೆ ನೋವಾಗಿತ್ತು ಎನ್ನುತ್ತಾರೆ ಅಸ್ಸಾಂ ಸರಕಾರದ ಪ್ರಧಾನ ಕಾರ್ಯದರ್ಶಿ ವಿ.ಕೆ. ಪಿಪರ್ಸೆನಿಯಾ. ಕೇಂದ್ರ ಸರಕಾರದ ನೆರವು ಹಾಗೂ ಖಾಸಗಿ ತೋಟಗಳ ಮಾಲಕರ ಸಹಕಾರದಿಂದ ಕಾರ್ಮಿಕರ ವೇತನಕ್ಕೆ ಸಾಕಾಗುವಷ್ಟು ನಗದು ಹಣವನ್ನು ರಾಜ್ಯ ಸರಕಾರ ತೆಗೆದಿರಿಸಿಕೊಂಡಿತು. ರಾಜ್ಯ ಸರಕಾರಕ್ಕೆ ಚೆಕ್ ನೀಡಿ, ಅಷ್ಟೇ ಪ್ರಮಾಣದ ನಗದನ್ನು ತೆಗೆದು ಕೊಳ್ಳಬೇಕೆಂದು ಟೀ ಕಂಪನಿಗಳಿಗೆ ಸೂಚಿಸಲಾಯಿತು. ಇದರಿಂದ ವೇತನ ಪಾವತಿಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಇಡೀ ಅಸ್ಸಾಂ ಕೆಲವೇ ದಿನ ಗಳಲ್ಲಿ ಸಹಜ ಸ್ಥಿತಿ ಬಂದಿತು. ಈ ಉದಾಹರಣೆ ಬೇರೆ ರಾಜ್ಯಗಳಿಗೂ ಮಾದರಿ. ಬಹುತೇಕರು ಕೆಲವೇ ದಿನಗಳಲ್ಲಿ ಬ್ಯಾಂಕ್ ಖಾತೆ ಹೊಂದಲಿದ್ದು, ಇದು ಆರ್ಥಿಕ ಒಳಗೊಳ್ಳುವಿಕೆಗೆ ನೆರವಾಗಲಿದೆ. ಸಾವಿರಾರು ಬ್ಯಾಂಕ್ ಶಾಖೆಗಳು ತಲೆಯೆತ್ತಲಿವೆ ಎನ್ನುತ್ತಾರೆ ಪಿಪರ್ಸೆನಿಯಾ. ವಾಸ್ತವವೆಂದರೆ, ಜನಧನ್ ಯೋಜನೆಯಡಿ ಕಳೆದ ಎರಡು ವರ್ಷದಲ್ಲಿ ಸ್ವಾತಂತ್ರ್ಯಾನಂತರ ಇದ್ದದ್ದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ.
ಬಡಜನರ ಬಗ್ಗೆ ಕಾಳಜಿಯ ಪ್ರಶ್ನೆ ಬಂದಲ್ಲಿ, ನೋಟು ರದ್ದು ಈವರೆಗಿನ ಯಾವುದೇ ಸರಕಾರ ತೆಗೆದುಕೊಳ್ಳದ ಅತ್ಯಂತ ಜನಪರ ಕೆಲಸ ಎನ್ನಬಹುದು. ಇತ್ತೀಚಿನ ವರದಿಯೊಂದರ ಪ್ರಕಾರ, ಶೇ 59 ರಷ್ಟು ರಾಷ್ಟ್ರೀಯ ಸಂಪತ್ತು ಶೇ 1ರಷ್ಟು ಶ್ರೀಮಂತರ ಕೈಯಲ್ಲಿದ್ದು, ಶೇ 10 ರಷ್ಟು ಕಡು ಬಡವರ ಪಾಲು ಶೇ 0.2 ರಷ್ಟು ಇದೆ. ಬಡವರು-ಶ್ರೀಮಂತರ ನಡುವಿನ ಅಂತರ 2004- 2014ರ ಅವಧಿಯಲ್ಲಿ 1480ರಿಂದ 2450ಕ್ಕೆ ಅಧಿಕಗೊಂಡಿರುವ ದೇಶದಲ್ಲಿ ಮೋದಿ ಅವರು ಸಮಾನತೆಯ ಪ್ರತಿಪಾದಕರಾಗಿ ಕೆಲಸ ಮಾಡಿದ್ದಾರೆ. ಸಮಾಜದಲ್ಲಿನ ತೀವ್ರ ಅಸಮಾನತೆಯನ್ನು ಸರಿ ಪಡಿಸಲು ಇಂಥ ಕ್ರಮ ಅವಶ್ಯ ವಾಗಿತ್ತು. ಇದು ಸರಿಯಾದ ದಿಕ್ಕಿನಕ್ಕಿ ಇರಿಸಿದ ಹೆಜ್ಜೆ.
ಇದರೊಂದಿಗೆ ಪ್ರಧಾನಿಯವರು ಡಾ.ಬಿ.ಆರ್ ಅಂಬೇಡ್ಕರ್ ಅವರು ಹೇಳಿದ "ಸಾಮಾಜಿಕ ಮತ್ತು ಆರ್ಥಿಕ ಸಮಾನತೆ” ಜಾರಿಗೆ ತಮ್ಮ ಬದ್ಧತೆಯನ್ನು ತೋರಿಸಿ ದ್ದಾರೆ.ಈ ಉಪಕ್ರಮದಿಂದ ರಾಜಕೀಯದಲ್ಲಿ ಕಪ್ಪು ಹಣ ಮತ್ತು ಧನಾಢ್ಯರ ಹಿಡಿತ ಕಡಿಮೆಯಾಗಲಿದೆ. ರಾಜಕೀಯದಲ್ಲಿ ಆಸಕ್ತಿ ಇರುವ ಎಲ್ಲರಿಗೂ ಅವಕಾಶ ದಕ್ಕಲಿದ್ದು, ಪ್ರತಿಭಾವಂತರು ರಾಜಕೀಯ ಕ್ಷೇತ್ರಕ್ಕೆ ಬರಲಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಹಾಗೂ ಬ್ಯಾಂಕ್ ಸಾಲದ ಬಡ್ಡಿ ಕಡಿಮೆಯಾಗಲಿದೆ. ಬಂಡವಾಳ ಹೂಡಿಕೆ ಹೆಚ್ಚಲಿದೆ. ಕಪ್ಪು ಹಣ ಮತ್ತು ನಕಲಿ ನೋಟು ಪ್ರಸರಣ ಕುಸಿದು, ಅಪರಾಧ ಮತ್ತು ಉಗ್ರಗಾಮಿ ಕೃತ್ಯಗಳು ಕಡಿಮೆಯಾಗಲಿವೆ. ಜನಸಾಮಾನ್ಯರ ಬದುಕು ಸುರಕ್ಷಿತವಾಗಲಿದೆ. ಸರಕಾರದ ಖಜಾನೆಗೆ ಹೆಚ್ಚು ಹಣ ಹರಿಯಲಿದ್ದು, ಮೂಲಸೌಕರ್ಯ ನಿರ್ಮಾಣ, ಜನಕಲ್ಯಾಣ ಕಾರ್ಯಕ್ರಮಗಳು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಲಿದೆ. ಡೊನೇಷನ್ ಹಾವಳಿ ತಪ್ಪಲಿದ್ದು, ಶಿಕ್ಷಣದ ವ್ಯಾಪಾರೀಕರಣ ನಿಲ್ಲಲಿದೆ. ಮೋದಿಯವರ ಕನಸಾದ ಎಲ್ಲರಿಗೂ ಮನೆ ಮತ್ತು 50 ದಶ ಲಕ್ಷ ಬಿಪಿಎಲ್ ಕುಟುಂಬಗಳಿಗೆ ಪುಕ್ಕಟೆ ಎಲ್ಪಿಜಿ ಸಂಪರ್ಕ ಕಲ್ಪಿಸುವ ಯೋಜನೆಗಳು ಪ್ರಸ್ತುತ ಇರುವ ದುಬಾರಿ ರಿಯಲ್ ಎಸ್ಟೇಟ್ ವ್ಯವಸ್ಥೆಯಲ್ಲಿ ಸಾಧ್ಯವಿರಲಿಲ್ಲ. ಅವರು ಬಡವರ ರಕ್ಷಕರಾಗಿ ಹೊರಹೊಮ್ಮಿದ್ದಾರೆ.
ಸಮಾನತೆಯ ಸಮಾಜ ನಿರ್ಮಾಣ, ಬಲಾಢ್ಯರು, ಕಪ್ಪು ಹಣ ಮತ್ತು ಭ್ರಷ್ಟಾಚಾರ ನಿವಾರಣೆ ಸರ್ಕಾರದ ಗುರಿಯಾಗಿದ್ದು, ಐಶ್ವರ್ಯದ ಸಮ ಪ್ರಮಾಣದ ಹಂಚಿಕೆಯ ಉದ್ದೇಶವನ್ನು ಹೊಂದಿದೆ. ನೋಟುಗಳ ರದ್ದಿನಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಹಣ ಹಂಚಿಕೆ ಪಾರದರ್ಶಕವಾಗಲಿದ್ದು, ಬಹುತೇಕರ ಶ್ರಮದಿಂದ ಕೆಲವರು ದೌಲತ್ತಿನ ಜೀವನ ನಡೆಸುವುದು ಕೊನೆಗೊಳ್ಳಲಿದೆ.
ಲೇಖಕರು ಹಿರಿಯ ಪತ್ರಕರ್ತ,ಆರ್ಥಿಕ ವಿಷಯಗಳನ್ನು ಕುರಿತು ಬರೆಯುತ್ತಾರೆ.
ಲೇಖನದಲ್ಲಿನ ಅಭಿಪ್ರಾಯ ವೈಯಕ್ತಿಕ.





