ದ್ವಿತೀಯ ಟೆಸ್ಟ್: ಇಂಗ್ಲೆಂಡ್ 87/2
ಅಲಿಸ್ಟರ್ ಕುಕ್ ಅರ್ಧಶತಕ

ವಿಶಾಖಪಟ್ಟಣ, ನ.20: ಬಂದರು ನಗರಿಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಗೆಲುವಿಗೆ 405 ರನ್ ಗುರಿ ಪಡೆದಿರುವ ಇಂಗ್ಲೆಂಡ್ ತಂಡ ನಾಲ್ಕನೆ ದಿನದಾಟದಂತ್ಯಕ್ಕೆ 87 ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ.
ರವಿವಾರ ನಾಲ್ಕನೆ ದಿನದಾಟದ ಕೊನೆಯ ಎಸೆತದಲ್ಲಿ ನಾಯಕ ಅಲಿಸ್ಟರ್ ಕುಕ್(54 ರನ್, 188 ಎಸೆತ, 4 ಬೌಂಡರಿ) ರವೀಂದ್ರ ಜಡೇಜಗೆ ವಿಕೆಟ್ ಒಪ್ಪಿಸಿದರು.
ಇನಿಂಗ್ಸ್ ಆರಂಭಿಸಿದ ಕುಕ್ ಹಾಗೂ ಹಮೀದ್(25 ರನ್) ಮೊದಲ ವಿಕೆಟ್‌ಗೆ 75 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಯುವ ಬ್ಯಾಟ್ಸ್‌ಮನ್ ಹಮೀದ್‌ರನ್ನು ಆರ್.ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಕುಕ್ ದಿನದ ಕೊನೆಯ ಎಸೆತದಲ್ಲಿ ಔಟಾದರು. ಆಗ ಮತ್ತೊಂದು ತುದಿಯಲ್ಲಿ ಜೋ ರೂಟ್(ಅಜೇಯ 05) ಇದ್ದರು. ಇಂಗ್ಲೆಂಡ್‌ಗೆ ಕೊನೆಯ ದಿನವಾದ ಸೋಮವಾರ ಉಳಿದ 8 ವಿಕೆಟ್‌ಗಳ ನೆರವಿನಿಂದ ಇನ್ನೂ 318 ರನ್ ಗಳಿಸಬೇಕಾಗಿದೆ.
ಇದಕ್ಕೆ ಮೊದಲು ಅತ್ಯುತ್ತಮ ದಾಳಿ ಸಂಘಟಸಿದ ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್(4-33) ಹಾಗೂ ಸ್ಪಿನ್ನರ್ ಆದಿಲ್ ರಶೀದ್(4-82) ಭಾರತವನ್ನು ಎರಡನೆ ಇನಿಂಗ್ಸ್‌ನಲ್ಲಿ 204 ರನ್‌ಗೆ ಆಲೌಟ್ ಮಾಡಿದರು.
ಕೊನೆಯ ವಿಕೆಟ್‌ಗೆ ಉಪಯುಕ್ತ 42 ರನ್ ಜೊತೆಯಾಟ ನಡೆಸಿದ ಜಯಂತ್ ಯಾದವ್(ಅಜೇಯ 27) ಹಾಗೂ ಮುಹಮ್ಮದ್ ಶಮಿ(19) ಭಾರತ ತಂಡ ಇಂಗ್ಲೆಂಡ್‌ಗೆ 405 ರನ್ ಗುರಿ ನಿಗದಿಪಡಿಸಲು ನೆರವಾದರು.







