ನೋಟು ಅಮಾನ್ಯಗೊಂಡಾಗ ಜನ ತತ್ತರಿಸಿದರೆ ಈ ವ್ಯಕ್ತಿ ಮಾತ್ರ ಖುಷಿಪಟ್ಟರು..!

ಬೆರಾಂಪುರ, ನ.20: ಕೇಂದ್ರ ಸರಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಇದ್ದಕ್ಕಿದ್ದಂತೆ ಅಮಾನ್ಯಗೊಳಿಸಿದಾಗ ದೇಶದ ಬಹುತೇಕ ಜನರು ದಿಗಿಲುಗೊಂಡಿದ್ದರು. ಆದರೆ ಒಡಿಸ್ಸಾದ ಓರ್ವ ವ್ಯಕ್ತಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.
ದಕ್ಷಿಣ ಒಡಿಸ್ಸಾದ ಬೆರಾಂಪುರ ನಿವಾಸಿ ಪಿ.ಅನಿಲ್ ಕುಮಾರ್ ಎಂಬವರೇ ಈ ವ್ಯಕ್ತಿ. ಚಲಾವಣೆಯಿಂದ ಹಿಂಪಡೆದ, ಅಮಾನ್ಯಗೊಂಡ ಭಾರತೀಯ ಕರೆನ್ಸಿ ನೋಟು, ನಾಣ್ಯಗಳನ್ನು ಸಂಗ್ರಹಿಸುವುದು ಇವರ ಹವ್ಯಾಸ. ಇದೀಗ ಇವರ ಸಂಗ್ರಹಕ್ಕೆ ಮತ್ತೆರಡು ನೋಟುಗಳು ಸೇರಿಕೊಂಡಿರುವುದೇ ಇವರ ಸಂಭ್ರಮಕ್ಕೆ ಕಾರಣ. ಉದ್ಯಮಿಯಾಗಿರುವ ಅನಿಲ್ ಕುಮಾರ್ ಬಳಿ ಸ್ವಾತಂತ್ರಪೂರ್ವ ಕಾಲದಿಂದ ಹಿಡಿದು ಈಚಿನ ಅವಧಿಯವರೆಗೆ ರದ್ದಾದ, ಅಮಾನ್ಯಗೊಂಡ ಭಾರತೀಯ ನಾಣ್ಯಗಳು, ನೋಟುಗಳ ಬೃಹತ್ ಸಂಗ್ರಹವೇ ಇದೆ. 1 ರೂ. ನೋಟಿನಿಂದ 1 ಸಾವಿರ ರೂ.ವರೆಗಿನ ನೋಟುಗಳು ಇವರಲ್ಲಿವೆ. 500 ರೂ. ಮುಖಬೆಲೆಯ ಮೂರು ವಿಧದ ನೋಟುಗಳು, 1000 ರೂ. ಮುಖಬೆಲೆಯ ಎರಡು ವಿಧದ ನೋಟುಗಳು, 10 ರೂ. 5 ರೂ. ಮತ್ತು 1 ರೂಪಾಯಿಯ ಆರು ವಿಧದ ನೋಟುಗಳು, 100 ರೂ.ಮುಖಬೆಲೆಯ ಐದು ವಿಧದ ನೋಟುಗಳು, 20 ರೂ. ಮುಖಬೆಲೆಯ ಮೂರು ವಿಧದ ನೋಟುಗಳು ಇವರ ಸಂಗ್ರಹದಲ್ಲಿವೆ.
ಇವರ ಬಳಿ ಇರುವ ಕೆಲವು ನೋಟುಗಳ ನಂಬರ್ ಗಮನಿಸಿ: 48 ಎಚ್ 700000(10 ರೂ. ನೋಟು), ಜೆಪಿಟಿ 600000(100 ರೂ. ನೋಟು), 6ಸಿಎ 577777(500 ರೂ. ನೋಟು), 7ಇಎ 000007 ( 1000 ರೂ. ನೋಟು).
ಬಾಲ್ಯಕಾಲದಿಂದಲೇ ಈ ಹವ್ಯಾಸ ಬೆಳೆಸಿಕೊಂಡಿದ್ದ ಕುಮಾರ್ ಬಳಿ ಮೊಗಲರ ಕಾಲದಿಂದ ಹಿಡಿದು ಇದುವರೆಗಿನ ಅವಧಿಯಲ್ಲಿ ಚಲಾವಣೆಯಲ್ಲಿದ್ದ 5 ರೂ. ಮುಖಬೆಲೆಯ 30 ವಿಧದ ನಾಣ್ಯಗಳಿವೆ.
ಈಸ್ಟ್ ಇಂಡಿಯಾ ಕಂಪೆನಿ ಹೊರತಂದ ನಾಣ್ಯಗಳು, ಸ್ವಾತಂತ್ರಪೂರ್ವ ಮತ್ತು ಸ್ವಾತಂತ್ರೋತ್ತರ ಅವಧಿಯ ನಾಣ್ಯಗಳು ಇವರ ಬಳಿಯಿವೆ. ಅಲ್ಲದೆ 25 ದೇಶಗಳ ನಾಣ್ಯಗಳು ಇವರ ಸಂಗ್ರಹದಲ್ಲಿವೆ. ಪ್ರತೀ ಬಾರಿ ಸರಕಾರ ನಾಣ್ಯ ಅಥವಾ ನೋಟುಗಳನ್ನು ಅಮಾನ್ಯಗೊಳಿಸಿದಾಗ ತಕ್ಷಣ ಅವನ್ನು ಪಡೆದು ನನ್ನ ಸಂಗ್ರಹಕ್ಕೆ ಸೇರಿಸಿಕೊಳ್ಳುತ್ತೇನೆ. ನಾಣ್ಯಗಳನ್ನು ನೋಡಿದಾಕ್ಷಣ ಒಂದು ದೇಶ, ರಾಜವಂಶ, ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ನಮಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು.
ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ಹಣ ಚಲಾವಣೆಗೆ ಬಂದರೆ ನಾಣ್ಯಗಳು ಅಪರೂಪವಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಏನೇ ಆದರೂ ನಾಣ್ಯ ಮತ್ತು ನೋಟು ಸಂಗ್ರಹಿಸುವ ನನ್ನ ಕಾರ್ಯ ಮುಂದುವರಿಯುತ್ತದೆ ಎಂದುತ್ತರಿಸುತ್ತಾರೆ.







