ಶವ ಸಾಗಿಸಲು ತುರ್ತು ಪರಿಹಾರವಾಗಿ ಹಳೆಯ ನೋಟುಗಳನ್ನು ನೀಡಿದ ರೈಲ್ವೆ!
ಕಾನಪುರ,ನ.20: ರೈಲು ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡವರ ನೋವಿಗೆ ಅಂತ್ಯವೇ ಇಲ್ಲ. ಆದರೆ ರೈಲ್ವೈ ಇಲಾಖೆ ಅವರ ಹೃದಯಕ್ಕೆ ಆಗಿರುವ ಗಾಯಗಳ ಮೇಲೆ ಉಪ್ಪು ಸವರುತ್ತಿದೆ. ಈ ಭೀಕರ ಅಪಘಾತದಲ್ಲಿ ರಾಮಕೇವಲ್ ತನ್ನ ಪುತ್ರಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ತುರ್ತು ಪರಿಹಾರವಾಗಿ ರೈಲ್ವೆ ಅಧಿಕಾರಿಗಳು ನೀಡಿರುವ 5,000 ರೂ.ಗಳಲ್ಲಿ 100ರ ಐದು ನೋಟುಗಳಿದ್ದರೆ, ಉಳಿದ ನೋಟುಗಳೆಲ್ಲ ಹಳೆಯ 500 ರೂ.ಗಳಾಗಿವೆ! ಈ ಹಣವನ್ನು ನೋಡಿದ ತಕ್ಷಣ ರಾಮಕೇವಲ್ ಕುಳಿತಲ್ಲೇ ಕಣ್ಣೀರಾದರು. ಅವರು ಈ ಬಗ್ಗೆ ಹೇಳಿದ್ದಿಷ್ಟೇ...ಈಗ ನೋಟುಗಳಿಂದ ಏನಾಗಬೇಕಿದೆ? ನನ್ನ ಕಣ್ಣುಗಳೆದುರೇ ನನ್ನ ಪುಟ್ಟಮಗಳು ಒದ್ದಾಡಿ ಸತ್ತುಹೋಗಿದ್ದಾಳೆ.
ಇಷ್ಟಾದ ಬಳಿಕ ಮಗಳ ಶವವನ್ನು ಊರಿಗೆ ಸಾಗಿಸಲು ರಾಮಕೇವಲ್ ವಾಹನವೊಂದನ್ನು ಗೊತ್ತು ಮಾಡಿದ್ದರು. ಆದರೆ ಹಳೆಯ 500 ರೂ.ನೋಟುಗಳನ್ನು ಪಡೆಯಲು ಚಾಲಕ ಖಡಾಖಂಡಿತವಾಗಿ ನಿರಾಕರಿಸಿದ್ದ. ರಾಮಕೇವಲ್‌ರ ಗೋಳನ್ನು ನೋಡುತ್ತಿದ್ದ ಅಲ್ಲಿದ್ದವರಿಗೆ ಕರುಣೆಯುಕ್ಕಿ ಹೊಸ ನೋಟುಗಳನ್ನೇ ನೀಡುವುದಾಗಿ ಚಾಲಕನಿಗೆ ಹೇಳಿ ಶವಸಾಗಾಟಕ್ಕೆ ಒಪ್ಪಿಸಿದರು.
ರಾಮಕೇವಲ್ ಸಂಬಂಧಿಕರ ಮದುವೆಗೆಂದು ಕುಟುಂಬ ಸಹಿತ ಈ ನತದೃಷ್ಟ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.











