ಮಹಿಳೆಯರ ಭಾವನೆಗಳಿಗೆ ಗೌರವ ಸಿಗುವಂತಾಗಲಿ: ಸಂಧ್ಯಾ ರೆಡ್ಡಿ
ಮೂಡುಬಿದಿರೆ, ನ.20: ಕೌಟುಂಬಿಕವಾಗಿ ಮಹಿಳೆಗೆ ಹೆಚ್ಚಿನ ಜವಾಬ್ದಾರಿಗಳಿವೆ. ಆಕೆಯ ಭಾವನೆಗಳನ್ನು ಸಮಾಜ ಗೌರವಿಸುವಂತಾಗಬೇಕು ಎಂದು ಸಾಹಿತಿ ಡಾ.ಕೆ.ಆರ್.ಸಂಧ್ಯಾ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ‘ಆಳ್ವಾಸ್ ನುಡಿಸಿರಿ-2016’ ಕನ್ನಡ ನಾಡುನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ರತ್ನಾಕರವರ್ಣಿ ವೇದಿಕೆಯ ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ನಡೆದ ‘ಮಹಿಳೆ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಮಹಿಳೆಗೆ ಸಮಾಜದಲ್ಲಿ ಮಗಳಾಗಿ, ಪತ್ನಿಯಾಗಿ, ಸೊಸೆಯಾಗಿ, ಅತ್ತೆಯಾಗಿ, ತಾಯಿಯಾಗಿ ಕೊನೆಗೆ ವಿಧವೆಯಾಗಿ ಕುಟುಂಬವನ್ನು ಮುನ್ನಡೆಸಬೇಕಾದ ಹಲವು ಜವಾಬ್ದಾರಿಗಳು ಆಕೆಯ ಮೇಲಿದೆ. ಹಲವು ನಿರ್ಬಂಧಗಳ ಅನಿವಾರ್ಯತೆಯ ನಡುವೆ ಆಕೆ ಬದುಕು ಕಟ್ಟಿಕೊಳ್ಳಬೇಕಾಗಿದೆ. ಮಹಿಳೆಗೆ ತಾಯಿಯ ಸ್ಥಾನವನ್ನು ನೀಡುವ ಸಮಾಜ ಆಕೆಯ ಭಾವನೆಗಳಿಗೆ ನಕಾರಾತ್ಮಕ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಹೆಣ್ಣಿನ ಭಾವನೆ, ಆಕಾಂಕ್ಷೆಗಳು ಗೌರವಿಸಲ್ಪಡಬೇಕು ಎಂದರು.
ಸಮಾಜದಲ್ಲಿ ಪುರುಷನ ಸಾಮರ್ಥ್ಯಗಳನ್ನೇ ಪರಿಗಣಿಸಲಾಗುತ್ತದೆ. ಹೆಣ್ಣಿನ ಶಕ್ತಿ ಮತ್ತು ಆಕೆಯ ಅಂತರ್ ಸಾಮರ್ಥ್ಯದ ಬಗ್ಗೆ ಯೋಚಿಸುತ್ತಿಲ್ಲ. ಕೆಲವೊಮ್ಮೆ ಹೆಣ್ಣಿನ ಪಾತ್ರವೂ ಟೀಕೆಗೆ ಗುರಿಯಾಗಿದ್ದೂ ಇದೆ. ಅನೇಕ ವಿಷಯಗಳಲ್ಲಿ ಮಹಿಳೆ ಭಾವುಕಳಾಗುತ್ತಾಳೆ ಎಂಬ ತಪ್ಪುಕಲ್ಪನೆಗಳಿವೆ. ಭಾವುಕತೆ, ದಯೆ, ಕರುಣೆ ಸಹಿತ ಮಾನವೀಯ ವೌಲ್ಯಗಳು ಮಹಿಳೆಯ ಸಹಜ ಗುಣವಾಗಿದೆ. ಕೌಟುಂಬಿಕ ಜವಾಬ್ದಾರಿಗಳ ಜೊತೆಗೆ ಸಾಮಾಜಿಕ ಕಟ್ಟುಪಾಡು ಮತ್ತು ಪಾರಂಪರಗತ ಚೌಕಟ್ಟಿನೊಳಗಿನ ಆಕೆಯ ಬದುಕಿನಿಂದಾಗಿ ಆಕೆಯ ಸಾಮರ್ಥ್ಯ ಗುರುತಿಸಲ್ಪಡದಿರಬಹುದು. ಅಥವಾ ಜವಾಬ್ದಾರಿಗಳನ್ನು ಈಡೇರಿಸುವಾಗ ಅವಕಾಶಗಳು ಸಿಗದಿರಬಹುದು. ಮಹಿಳೆಯ ಸಾಮರ್ಥ್ಯವನ್ನು ಪ್ರಶ್ನಿಸುವುದು ಮತ್ತು ಪುರುಷನ ಸಾಮರ್ಥ್ಯವನ್ನು ಭಿನ್ನ ರೀತಿಯಲ್ಲಿ ಪರಿಗಣಿಸಲ್ಪಡುವುದು ಸರಿಯಲ್ಲ ಎಂದು ಡಾ.ಸಂಧ್ಯಾ ರೆಡ್ಡಿ ಹೇಳಿದರು.







