ಮಾಜಿ ಫುಟ್ಬಾಲ್ ಆಟಗಾರ ಟಿ.ಎ.ರಹ್ಮಾನ್ ನಿಧನ

ಮಂಗಳೂರು, ನ. 20: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ, ಮಾಜಿ ಫುಟ್ಬಾಲ್ ಆಟಗಾರ, ತರಬೇತುದಾರ, ಪ್ರಸ್ತುತ ತೊಕ್ಕೊಟು ಸಮೀಪದ ಬಬ್ಬುಕಟ್ಟೆ ನಿವಾಸಿ ಟಿ.ಎ. ರಹ್ಮಾನ್ (75) ಅಸೌಖ್ಯದಿಂದ ಇಂದು ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರ ಸಹಿತ ಬಂಧು, ಮಿತ್ರರನ್ನು ಅಗಲಿದ್ದಾರೆ.
ಸ್ಥಳೀಯವಾಗಿ ಫುಟ್‌ಬಾಲ್ ಪ್ಲೆಯರ್ ಎಂದೇ ಚಿರಪರಿಚಿತರಾಗಿದ್ದ ಟಿ.ಎ.ರಹ್ಮಾನ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಪಡೆದ ಬಳಿಕ ಮುಂಬೈಯಲ್ಲೇ ವಾಸಮಾಡಿದ್ದರು. ಬಾಲ್ಯದಲ್ಲೇ ಫುಟ್‌ಬಾಲ್ ಕ್ರೀಡೆಯಲ್ಲಿ ಆಸಕ್ತರಾಗಿದ್ದ ಅವರು, ಮುಂಬಯಿಯಲ್ಲಿದ್ದುಕೊಂಡು ತಮ್ಮನ್ನು ಫುಟ್‌ಬಾಲ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ವರ್ಷಗಳ ಕಾಲ ಮಂಗಳೂರಿಗೆ ಆಗಮಿಸಿ ಮಂಗಳೂರು ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ಗುರುತಿಸಿಕೊಂಡಿದ್ದರು. ಈ ಕ್ಲಬ್‌ನ ಮೂಲಕ ಹಲವು ಫುಟ್‌ಬಾಲ್ ಪಂದ್ಯಾಟವನ್ನು ಆಡಿದ್ದರು. ತದನಂತಹ ಯುವಕರಿಗೆ ಮತ್ತು ಶಾಲಾ ಮಕ್ಕಳಿಗೆ ಫುಟ್‌ಬಾಲ್ ತರಬೇತಿ ನೀಡಿ ಕ್ರೀಡಾಪಟುಗಳನ್ನಾಗಿ ಮಾಡಿದ್ದರು.
ಜೀವನದಲ್ಲಿ ಸುಮಾರು 40ರಿಂದ 45 ವರ್ಷಗಳ ಕಾಲ ಫುಟ್‌ಬಾಲ್‌ಗಾಗಿ ಸೇವೆ ಸಲ್ಲಿಸಿದ್ದರು. ಅಸೌಖ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಮುಂಜಾನೆ ಸುಮಾರು 3:30ಕ್ಕೆ ಕೊನೆಯುಸಿರೆಳೆದರು ಎಂದು ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿ.ಎಂ.ಅಸ್ಲಂ ತಿಳಿಸಿದ್ದಾರೆ.
ನಗರದ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಇಂದು ರೊಹರ್ ನಮಾಝಿನ ಬಳಿಕ ಮಯ್ಯಿತ್ ನಮಾಝ್ ನೆರವೇರಿತು.
ಸಂತಾಪ
ಟಿ.ಎ.ರಹ್ಮಾನ್ ನಿಧನಕ್ಕೆ ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸಿಯೇಶನ್‌ನ ಉಪಾಧ್ಯಕ್ಷ ವಿಜಯ ಸುವರ್ಣ, ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿ.ಎಂ.ಅಸ್ಲಂ, ಕಾರ್ಯದರ್ಶಿ ಹುಸೇನ್ ಬೋಳಾರ್, ಉಮೇಶ್ ಉಚ್ಚಿಲ್ ಸಂತಾಪ ಸೂಚಿಸಿದ್ದಾರೆ.







