ಬಿಸಿಸಿಐಯಿಂದ ದಿನಭತ್ಯೆಯ ನಿರೀಕ್ಷೆಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು!

ವಿಶಾಖಪಟ್ಟಣ, ನ.20: ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತಕ್ಕೆ ಆಗಮಿಸಿ 18 ದಿನಗಳು ಕಳೆದಿವೆ. ತಂಡದ ಸದಸ್ಯರು ಬಿಸಿಸಿಐಯಿಂದ ಇನ್ನಷ್ಟೇ ದಿನಭತ್ಯೆಯನ್ನು ಪಡೆಯಬೇಕಾಗಿದೆ. ಬಿಸಿಸಿಐ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ)ಗಳು ದಿನಭತ್ಯೆ ಪಾವತಿಗೆ ಅವಕಾಶ ನೀಡುವ ತಿಳುವಳಿಕೆ ಪತ್ರಕ್ಕೆ ಇನ್ನೂ ಸಹಿ ಹಾಕಿಲ್ಲ.
ಸುಪ್ರೀಂಕೋರ್ಟ್ ಇಂಗ್ಲೆಂಡ್ ವಿರುದ್ಧದ ಮೊದಲ ಮೂರು ಟೆಸ್ಟ್ ಪಂದ್ಯಗಳಿಗೆ 58.6 ಲಕ್ಷ ರೂ.ವನ್ನು ಆಯೋಜಕರಿಗೆ ಮಂಜೂರು ಮಾಡಿದೆ. ಇದರಲ್ಲಿ ದಿನಭತ್ಯೆ ಒಳಗೊಂಡಿಲ್ಲ. ಭಾರತ ಸರಕಾರ ಇತ್ತೀಚೆಗೆ ಗರಿಷ್ಠ ಮೊತ್ತದ ನೋಟುಗಳಿಗೆ ನಿಷೇಧ ವಿಧಿಸಿರುವುದು ಇಂಗ್ಲೆಂಡ್ ಆಟಗಾರರಿಗೆ ಪರೋಕ್ಷವಾಗಿ ಪರಿಣಾಮ ಬೀರಿದೆ. ಅವರ ಬಳಿ ಇರುವ ಭಾರತದ ಕರೆನ್ಸಿ ನೋಟುಗಳು ಖಾಲಿಯಾಗುತ್ತಿವೆ.
ಹೌದು, ಇಂಗ್ಲೆಂಡ್ ತಂಡದ ಸದಸ್ಯರು ಇನ್ನಷ್ಟೇ ಬಿಸಿಸಿಐಯಿಂದ ದಿನಭತ್ಯೆಯನ್ನು ಸ್ವೀಕರಿಸಬೇಕಾಗಿದೆ. ಇಂಗ್ಲೆಂಡ್ ತಂಡದ ಪ್ರತಿ ಸದಸ್ಯರಿಗೆ ಪ್ರತಿ ದಿನ 50 ಪೌಂಡ್(ಸುಮಾರು 4,200 ರೂ.) ದಿನಭತ್ಯೆ ನೀಡಬೇಕಾಗಿದೆ. ಪಂದ್ಯದ ಅಧಿಕಾರಿಗಳು ಹಾಗೂ ಭಾರತದ ಆಟಗಾರರಿಗೆ ದಿನಭತ್ಯೆ ನೀಡಲಾಗುತ್ತಿದೆ ಎನ್ನಲಾಗಿದೆ.
ಇಂಗ್ಲೆಂಡ್ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಕ್ರೆಡಿಟ್ ಕಾರ್ಡ್‌ನ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಮ್ಯಾನೇಜರ್ ಮೂಲಕ ಅವರಿಗೆ ಸ್ವಲ್ಪ ನಗದು(ಭಾರತೀಯ ಕರೆನ್ಸಿ) ನೀಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಹಣಕಾಸು ತೊಂದರೆಯಾಗದಿದ್ದರೂ, ಸೀಮಿತ ನಗದು ಲಭ್ಯವಿರುವ ಕಾರಣ ಸಮಸ್ಯೆ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.







