ಕಾನ್ಪುರ ರೈಲು ದುರಂತ 120 ಸಾವು
150ಕ್ಕೂ ಅಧಿಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಜಾಗೃತ ಸ್ಥಿತಿಯಲ್ಲಿರುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. 30ಕ್ಕೂ ಅಧಿಕ ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ರೈಲು ಹಳಿಯಲ್ಲಿನ ಬಿರುಕು ಅಪಘಾತಕ್ಕೆ ಕಾರಣವಾಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಘಟನಾ ಸ್ಥಳದಲ್ಲಿದ್ದ ಸಹಾಯಕ ರೈಲ್ವೆ ಸಚಿವ ಮನೋಜ್ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದರು.
ರೈಲ್ವೆ ಮಂಡಳಿಯ ಸದಸ್ಯರು (ಇಂಜಿನಿಯರಿಂಗ್) ಅಪಘಾತಕ್ಕೆ ಕಾರಣವನ್ನು ಕಂಡುಕೊಳ್ಳುತ್ತಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಜರಗಿಸಲಾಗುವುದು ಎಂದರು. ಗ್ಯಾಸ್ ಕಟರ್‌ಗಳು ಅತಿಯಾದ ಉಷ್ಣತೆ ಮತ್ತು ಉಸಿರುಗಟ್ಟುವಿಕೆಗೆ ಕಾರಣವಾದ ಬಳಿಕ ರಕ್ಷಣಾ ಕಾರ್ಯಕರ್ತರು ಕೋಲ್ಡ್ ಕಟರ್‌ಗಳನ್ನು ಬಳಸಿ ಬೋಗಿಗಳ ಕವಚಗಳನ್ನು ಕತ್ತರಿಸಿ ಅವುಗಳಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಿದರು.
ಸೇನೆಯ ವೈದ್ಯರು, ರೈಲ್ವೆ ಅಧಿಕಾರಿಗಳು, ಎನ್‌ಡಿಆರ್‌ಎಫ್ ಸಿಬ್ಬಂದಿ, ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ ಹಾಗೂ ಇತರ ಪೊಲೀಸರು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದರು.
ಸಂತಾಪ
ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಸುರೇಶ ಪ್ರಭು, ಉ.ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ ಮತ್ತು ಇತರ ಹಲವಾರು ನಾಯಕರು ಈ ದುರಂತದಲ್ಲಿ ಮೃತಪಟ್ಟವರಿಗಾಗಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
43 ಮೃತರ ಗುರುತು ಪತ್ತೆ
ಮೃತರ ಪೈಕಿ ಸಂಜೆಯವರೆಗೆ 43 ಜನರನ್ನು ಗುರುತಿಸಲಾಗಿದ್ದು, ಈ ಪೈಕಿ 20 ಜನರು ಉತ್ತರ ಪ್ರದೇಶ,15 ಜನರು ಮಧ್ಯಪ್ರದೇಶ ಮತ್ತು ಆರು ಜನರು ಬಿಹಾರಕ್ಕೆ ಸೇರಿದವರಾಗಿದ್ದರೆ, ಇಬ್ಬರು ಮಹಾರಾಷ್ಟ್ರದವರಾಗಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಮೃತದೇಹಗಳನ್ನು ಸಾಗಿಸಲು ಕುಟುಂಬ ವರ್ಗಗಳಿಗೆ ಆ್ಯಂಬುಲೆನ್ಸ್ ಸೌಲಭ್ಯವನ್ನು ಒದಗಿಸಲಾಗಿದೆ.
ಭದ್ರತಾಪಡೆ ಸಿಬ್ಬಂದಿಗಳು ಬಲಿ
ಸೇನೆಯ ಯೋಧ ಪ್ರಭು ನಾರಾಯಣ ಸಿಂಗ್, ಬಿಹಾರದ ರೋಹ್ತಾಸ್ ಮೂಲದ ಬಿಎಸ್‌ಎಫ್ ಯೋಧ ಅನಿಲ್ ಕಿಶೋರ್ ಮತ್ತು ಝಾನ್ಸಿಯ ಪೊಲೀಸ್ ಕಾನ್‌ಸ್ಟೇಬಲ್ ಲಖನ್ ಸಿಂಗ್ ಎಂಬವರು ಮೃತರಲ್ಲಿ ಸೇರಿದ್ದಾರೆ.







