ರಕ್ಷಣಾ ಕಾರ್ಯ ಸಂಪೂರ್ಣ: ಭಾರತೀಯ ರೈಲ್ವೆ
ಹೊಸದಿಲ್ಲಿ,ನ.20: ಉತ್ತರ ಪ್ರದೇಶದ ಕಾನಪುರ ಗ್ರಾಮೀಣ ಜಿಲ್ಲೆಯ ಪುಖರಾಯಾಂ ಬಳಿ ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಸಂಭವಿಸಿದ ರೈಲು ಅಪಘಾತದ ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿದೆ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಪ್ರಯಾಣಿಕರಿಲ್ಲ. ಗಾಯಾಳುಗಳಿಗೆ ಮತ್ತು ಅವರ ಕುಟುಂಬಗಳಿಗೆ ಎಲ್ಲ ಅಗತ್ಯ ನೆರವನ್ನು ಒದಗಿಸಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯವು ರವಿವಾರ ಸಂಜೆ ಇಲ್ಲಿ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ಹೆಚ್ಚುಕಡಿಮೆ ಪೂರ್ಣಗೊಂಡಿದೆ. ಘಟನಾ ಸ್ಥಳದಲ್ಲಿ ಪ್ರಯಾಣಿಕರಾರೂ ಇಲ್ಲ. ಈ ವರೆಗೆ 97 ಸಾವುಗಳು ದೃಢಪಟ್ಟಿವೆ ಎಂದು ಭಾರತೀಯ ರೈಲ್ವೆಯ ವಕ್ತಾರ ಅನಿಲ್ ಸಕ್ಸೇನಾ ಸುದ್ದಿಸಂಸ್ಥೆಗೆ ತಿಳಿಸಿದರು.
ಪರಿಸ್ಥಿತಿಯನ್ನು ಎದುರಿಸಲು ಗೃಹ ಸಚಿವಾಲಯವೂ ಎಲ್ಲ ಅಗತ್ಯ ನೆರವನ್ನು ಒದಗಿಸಿದೆ. ಮುಂದಿನ 30-36 ಗಂಟೆಗಳಲ್ಲಿ ಹಳಿಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.
ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಅವರು ಅಪಘಾತದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತರಿಂದ ತನಿಖೆಗೆ ಆದೇಶಿಸಿದ್ದಾರೆ.
Next Story





