ಹಸೆಮಣೆ ಏರಲು ತೆರಳುತ್ತಿದ್ದ ವಧುವಿನಿಂದ ತಂದೆಗಾಗಿ ಹುಡುಕಾಟ
ಕಾನ್ಪುರ, ನ.20: ಇನ್ನು ಹತ್ತೇ ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದ 20ರ ಪ್ರಾಯದ ರೂಬಿ ಗುಪ್ತಾಗೆ ರವಿವಾರ ಇಲ್ಲಿ ನಡೆದ ಇಂದೋರ್-ಪಾಟ್ನಾ ಎಕ್ಸಪ್ರೆಸ್ ರೈಲು ದುರ್ಘಟನೆಯ ಬಳಿಕ ಆಕಾಶವೇ ಕಳಚಿಬಿದ್ದ ಅನುಭವವಾಗಿದೆ.
ರೂಬಿ ಡಿ.1 ರಂದು ನಡೆಯಲಿದ್ದ ತನ್ನ ಮದುವೆಗಾಗಿ ನಾಲ್ವರು ಸಹೋದರರು ಹಾಗೂ ತಂದೆಯೊಂದಿಗೆ ಅಝಂಗಢಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ದುರಂತದಲ್ಲಿ ಅದೃಷ್ಟವಶಾತ್ ರೂಬಿ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸಹೋದರ-ಸಹೋದರಿಯರು ಪತ್ತೆಯಾಗಿದ್ದಾರೆ. ಆದರೆ, ತಂದೆ ಮಾತ್ರ ಇನ್ನೂ ಪತ್ತೆಯಾಗದ ದುಃಖ ರೂಬಿಯನ್ನು ಕಾಡುತ್ತಿದೆ.
ರೈಲು ಹಳಿ ತಪ್ಪಿದ ಪರಿಣಾಮ ಈಗಾಗಲೇ 120ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ, ದುರಂತದಲ್ಲಿ ರೂಬಿಯ ಕೈ ಬಿರುಕುಬಿಟ್ಟಿದೆ. ಒಡಹುಟ್ಟಿದವರಾದ ಅರ್ಚನಾ, ಖುಷಿ, ಅಭಿಷೇಕ್ ಹಾಗೂ ವಿಶಾಲ್‌ಗೆ ಗಾಯವಾಗಿದೆ. ಆದರೆ, ರೂಬಿಯ ತಂದೆ ರಾಮ್ ಪ್ರಸಾದ್ ಗುಪ್ತಾ ಎಲ್ಲಿದ್ದಾರೆಂದು ಇನ್ನೂ ಪತ್ತೆಯಾಗಿಲ್ಲ.
ನನ್ನ ತಂದೆ ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ಎಲ್ಲ ಕಡೆ ಹುಡುಕಾಡಿದೆ. ಕೆಲವರು ಆಸ್ಪತ್ರೆಯಲ್ಲಿ ಹುಡುಕುವಂತೆ ಹೇಳಿದರು. ಆದರೆ, ನನಗೆ ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ. ನನ್ನ ಮದುವೆ ನಡೆಯುವುದು ಅನುಮಾನ. ಮದುವೆ ಬಟ್ಟೆ, ಒಡವೆ ಹಾಗೂ ಇತರ ವಸ್ತುಗಳು ದುರಂತದಲ್ಲಿ ಕಳೆದುಹೋಗಿವೆ. ನನ್ನ ಮದುವೆ ನಿಗದಿಯಂತೆ ನಡೆಯುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ, ನನಗೀಗ ತಂದೆ ಬೇಕು. ಅವರ ಬಗ್ಗೆ ನನಗೆ ಚಿಂತೆಯಾಗಿದೆ ಎಂದು ರೂಬಿ ಹೇಳಿದ್ದಾರೆ.







