ಬ್ಯಾಂಕ್‌ಗಳಿಗೆ ರಜೆ: ಎಟಿಎಂ ಮುಂದೆ ಹೆಚ್ಚಿದ ಜನಸಂದಣಿ
ಮುಂಬೈ, ನ.20: ಬ್ಯಾಂಕ್‌ಗಳಿಗೆ ಇಂದು ರಜೆ ಇದ್ದ ಕಾರಣ ಎಟಿಎಂ ಕೇಂದ್ರಗಳೆದುರು ಇಂದು ಜನಸಂದಣಿ ಹೆಚ್ಚಿತ್ತು. ಬಹುತೇಕ ಎಟಿಎಂಗಳಲ್ಲಿ ಹಣದ ಲಭ್ಯತೆ ಇದ್ದ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿವರೆಗೂ ಜನ ಎಟಿಎಂನಿಂದ ಹಣ ಪಡೆಯಲು ಸಾಧ್ಯವಾಗಿದೆ. ಆದರೆ ರವಿವಾರ ಪರಿಸ್ಥಿತಿ ಭಿನ್ನವಿತ್ತು. ಹೆಚ್ಚಿನ ಎಟಿಎಂ ಎದುರು ಜನ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶನಿವಾರ ರಾತ್ರಿ 11 ಗಂಟೆ ವೇಳೆಗೆ ಕೆಲಸ ಮುಗಿಸಿ ಲೋಕಲ್ ರೈಲಿನಲ್ಲಿ ಥಾಣೆಗೆ ವಾಪಸಾಗುತ್ತಿದ್ದಾಗ ಸ್ನೇಹಿತನ ಕರೆ ಬಂತು. ವಿಕ್ರೋಲಿಯ ಎಟಿಎಂ ನಲ್ಲಿ ರಶ್ ಕಡಿಮೆ ಇದೆ. ಸುಲಭದಲ್ಲಿ ಹಣ ಪಡೆಯಬಹುದು ಎಂದ. ತಕ್ಷಣ ಅಲ್ಲಿ ಇಳಿದು ವಿಕ್ರೋಲಿಗೆ ತೆರಳಿ 10 ನಿಮಿಷದೊಳಗೆ ಹಣ ಪಡೆದು ಬಂದೆ ಎಂದು ಥಾಣೆಯ ನಿವಾಸಿ ಸುನಿಲ್ ಗಾವ್ಡೆ ಎಂಬವರು ತಿಳಿಸಿದ್ದಾರೆ. ಆದರೆ ನಟ ಮತ್ತು ಮಾಡೆಲ್ ಆಗಿರುವ ವಿನ್ ರಾಣಾರಿಗೆ ಎರಡು ಗಂಟೆ ಕ್ಯೂನಲ್ಲಿ ನಿಂತರೂ ಹಣ ಪಡೆಯಲು ಸಾಧ್ಯವಾಗಿಲ್ಲ. ಇವರ ಸರದಿ ಬರುವ ವೇಳೆಗೆ ಎಟಿಎಂನಲ್ಲಿ ಹಣ ಖಾಲಿಯಾಗಿತ್ತು. ವಿರಾರ್ ಉಪನಗರದಲ್ಲಿ ಎಟಿಎಂ ಎದುರು ವಿಪರೀತ ಕ್ಯೂ ಇದ್ದ ಕಾರಣ ಸರದಿ ಸಾಲಿನಲ್ಲಿ ನಿಂತವರಿಗೆ ಕುಳಿತು ದಣಿವಾರಿಸಿಕೊಳ್ಳಲು ಕುರ್ಚಿಗಳನ್ನು, ಕುಡಿಯಲು ನೀರನ್ನು ಒದಗಿಸಲಾಯಿತು. ಶನಿವಾರ ತಡರಾತ್ರಿವರೆಗೂ ಎಟಿಎಂಗಳಲ್ಲಿ ಹಣ ಇತ್ತು ಮತ್ತು ರವಿವಾರ ಮುಂಜಾನೆಯೂ ಎಟಿಎಂ ಕಾರ್ಯಾಚರಿಸುತ್ತಿತ್ತು. ಇದೊಂದು ಶುಭ ಸೂಚನೆ ಎಂದು ವಿರಾರ್ ಉಪನಗರದ ನಿವಾಸಿ ಮಮತಾ ತಿಳಿಸಿದರು. ಗೋರೆಗಾಂವ್ ಉಪನಗರದಲ್ಲಿ ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತಿದ್ದವರು ಹಿರಿಯ ನಾಗರಿಕರೋರ್ವರಿಗೆ ಮೊದಲು ಹಣ ಪಡೆಯಲು ಅವಕಾಶ ಮಾಡಿಕೊಟ್ಟರು. ದಿನ ಕಳೆದಂತೆ ಒಟ್ಟಾರೆ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ. ಆದರೆ ಹಣದ ಬಿಕ್ಕಟ್ಟು ಮತ್ತು ಕೆಲವು ಎಟಿಎಂಗಳಲ್ಲಿ ಹಣ ಇಲ್ಲದಿರುವ ಪರಿಸ್ಥಿತಿಯಿಂದ ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಮತ್ತಷ್ಟು ತೊಂದರೆಯಾಗಬಹುದು ಎಂದು ಹಿರಿಯ ನಾಗರಿಕರೋರ್ವರು ಅಭಿಪ್ರಾಯ ಪಟ್ಟಿದ್ದಾರೆ.





