ತಪ್ಪಿತಸ್ಥರಿಗೆ ಗರಿಷ್ಠ 7 ವರ್ಷ ಕಠಿಣ ಶಿಕ್ಷೆ: ತೆರಿಗೆ ಇಲಾಖೆ
ಶಂಕಿತ ಹಣ ಠೇವಣಿ
ಹೊಸದಿಲ್ಲಿ, ನ.20: ಬೇರೆಯವರ ಬ್ಯಾಂಕ್ ಖಾತೆಗಳಲ್ಲಿ ತಮ್ಮ ಲೆಕ್ಕ ನೀಡದ ಹಳೆಯ ನೋಟುಗಳನ್ನು ಠೇವಣಿಯಿರಿಸುವುದರ ವಿರುದ್ಧ ಜನರಿಗೆ ಎಚ್ಚರಿಕೆ ನೀಡಿರುವ ತೆರಿಗೆ ಇಲಾಖೆ, ಇದನ್ನು ಉಲ್ಲಂಘಿಸುವವರ ವಿರುದ್ಧ ಹೊಸದಾಗಿ ಜಾರಿಯಾಗಿರುವ ಬೇನಾಮಿ ವ್ಯವಹಾರ ಕಾಯ್ದೆಯನ್ವಯ ಆರೋಪ ಹೊರಿಸಲು ನಿರ್ಧರಿಸಿದೆ. ಈ ಕಾಯ್ದೆಯನ್ವಯ ಅಂತಹವರಿಗೆ ದಂಡ, ಕಾನೂನು ಕ್ರಮ ಹಾಗೂ ಗರಿಷ್ಠ 7 ವರ್ಷಗಳ ಕಠಿಣ ಸಜೆ ವಿಧಿಸಲು ಅವಕಾಶವಿದೆ.
ಸಂಬಂಧಿತ ಬೆಳವಣಿಗೆಯೊಂದರಲ್ಲಿ ರದ್ದಾದ ನೋಟುಗಳ ಸಂಶಯಾಸ್ಪದ ಬಳಕೆಯ ಪ್ರಕರಣಗಳ ಕುರಿತು ನಡೆಸಿರುವ 80ಕ್ಕೂ ಹೆಚ್ಚು ಸಮೀಕ್ಷೆಗಳು ಹಾಗೂ 30ರಷ್ಟು ಶೋಧಗಳಿಂದ ರೂ.200 ಕೋಟಿಗೂ ಅಧಿಕ ಅಘೋಷಿತ ಆದಾಯವನ್ನು ಇಲಾಖೆಯು ಪತ್ತೆ ಮಾಡಿದೆ. ನ.8ರ ಬಳಿಕ ವಿವಿಧ ರಾಜ್ಯಗಳಲ್ಲಿ ಸುಮಾರು ರೂ.50 ಕೋಟಿ ವಶಪಡಿಸಿಕೊಂಡಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ನ.8ರ ಬಳಿಕ ಭಾರೀ ಹಣವನ್ನು ಠೇವಣಿಯಿರಿಸಲಾಗಿರುವ ಶಂಕಾಸ್ಪದ ಬ್ಯಾಂಕ್ ಖಾತೆಗಳನ್ನು ಗುರುತಿಸಲು ತೆರಿಗೆ ಅಧಿಕಾರಿಗಳು ದೇಶವ್ಯಾಪಿ ಕಾರ್ಯಾಚರಣೆ ಆರಂಭಿಸಿದ್ದಾರೆಂದು ಅವು ಹೇಳಿವೆ.
ಶಂಕೆಯು ನಿಜವೆಂದು ಕಂಡುಬಂದ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಈ ವರ್ಷ ನ.1ರಿಂದ ಜಾರಿಗೆ ಬಂದಿರುವ ಸ್ಥಿರ ಹಾಗೂ ಚರ ಆಸ್ತಿಗಳೆರಡಕ್ಕೂ ಅನ್ವಯವಾಗುವ ಬೇನಾಮಿ ಆಸ್ತಿ ವರ್ಗಾವಣೆ ಕಾಯ್ದೆ-1988ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುವುದು.
ಈ ಕಾಯ್ದೆಯು ಠೇವಣಿದಾರ ಹಾಗೂ ಆತನ ಖಾತೆಯಲ್ಲಿರಿಸಲು ಹಣ ನೀಡಿದವರ ವಿರುದ್ಧ ಕಾನೂನು ಕ್ರಮ ಹಾಗೂ ಆಸ್ತಿ ಮುಟ್ಟುಗೋಲಿನ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ಒದಗಿಸುತ್ತದೆಯೆಂದು ಮೂಲಗಳು ತಿಳಿಸಿವೆ.
ಈಗಾಗಲೇ ಅಂತಹ ಕೆಲವು ಪ್ರಕರಣಗಳು ವರದಿಯಾಗಿದ್ದು, ಇಲಾಖೆಯು ಬೇನಾಮಿ ಆಸ್ತಿ ಕಾಯ್ದೆಯನ್ವಯ ನೋಟಿಸ್ ನೀಡುವ ಸಿದ್ಧತೆಯಲ್ಲಿದೆಯೆಂದು ಅವು ಹೇಳಿವೆ.







