ಸಂಸತ್‌ನ ಸಂಬಳಕ್ಕೆ ಅಡ್ಡಿಯಾಗದಂತೆ ರೂ.5 ಕೋಟಿ ಸಿದ್ಧವಾಗಿಡಲು ಸೂಚನೆ
ಬ್ಯಾಂಕ್‌ಗೆ ಲೋಕಸಭಾ-ರಾಜ್ಯಸಭಾ ಕಾರ್ಯಾಲಯಗಳ ಮನವಿ
ಹೊಸದಿಲ್ಲಿ, ನ.20: ತಮ್ಮ ಸಿಬ್ಬಂದಿಗೆ ಮುಂಗಡ ವೇತನ ಪಾವತಿಸಲು ಅನುಕೂಲವಾಗುವಂತೆ ನ.21ರೊಳಗೆ ರೂ.5 ಕೋಟಿ ಲಭ್ಯವಾಗಿಸುವಂತೆ ಎಸ್‌ಬಿಐಯ ಸಂಸತ್‌ಭವನ ಶಾಖೆಗೆ ಲೋಕಸಭೆ ಹಾಗೂ ರಾಜ್ಯಸಭೆ ಕಾರ್ಯಾಲಯಗಳು ಸೂಚನೆ ನೀಡಿವೆ.
ಈ ಬಗ್ಗೆ ಬ್ಯಾಂಕ್‌ನ ಪ್ರಬಂಧಕ ಸುಧೀರ್ ಮಲ್ಹೋತ್ರ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗದರ್ಶನ ಕೋರಿದ್ದಾರೆ.
ಸೋಮವಾರದೊಳಗೆ(ನ.21) ತಮ್ಮ ಸಿಬ್ಬಂದಿಗೆ ತಲಾ ರೂ.10 ಸಾವಿರ ಮುಂಗಡ ಸಂಬಳ ನೀಡಲು ರೂ.5 ಕೋಟಿ ವ್ಯವಸ್ಥೆಗೊಳಿಸುವಂತೆ ಲೋಕಸಭೆ ಹಾಗೂ ರಾಜ್ಯಸಭೆ ಕಚೇರಿಗಳಿಂದ ಶುಕ್ರವಾರ ತಮಗೆ ಮನವಿ ಬಂದಿದೆ. ತಾನು ಈ ಬೇಡಿಕೆಯನ್ನು ಹಿರಿಯಾಧಿಕಾರಿಗಳಿಗೆ ರವಾನಿಸಿದ್ದೇನೆ ಹಾಗೂ ಆರ್‌ಬಿಐಯ ಮಾರ್ಗದರ್ಶನ ಕೋರಿದ್ದೇನೆಂದು ಮಲ್ಹೋತ್ರ ‘ಸಂಡೆ ಎಕ್ಸ್ ಪ್ರೆಸ್’ಗೆ ಖಚಿತಪಡಿಸಿದ್ದಾರೆ.
ಎಸ್‌ಬಿ ಖಾತೆದಾರನಿಗೆ ರೂ.24 ಸಾವಿರ ಹಾಗೂ ಚಾಲ್ತಿ ಖಾತೆದಾರನಿಗೆ ರೂ.50 ಸಾವಿರ ಪಾವತಿಸಬೇಕೆಂಬ ನಿಯಮವಿದೆಯೆಂದವರು ತಿಳಿಸಿದ್ದಾರೆ.
ಸಂಸತ್‌ನ ಎಲ್ಲ ಉದ್ಯೋಗಿಗಳಿಗೆ ಸಾಮಾನ್ಯವಾಗಿ ವೇತನವು ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತದೆ. ಕಾರ್ಯಾಲಯಗಳು ಈ ಹಿಂದೆ ನಗದಿಗೆ ಬೇಡಿಕೆ ಸಲ್ಲಿಸಿದ ಉದಾಹರಣೆಯಿಲ್ಲ. ಸುಮಾರು 4 ಸಾವಿರದಷ್ಟು ಸಂಸತ್ ನೌಕರರ ಖಾತೆಗಳು ಇದೇ ಎಸ್‌ಬಿಐ ಶಾಖೆಯಲ್ಲಿವೆಯೆಂದು ಮಲ್ಹೋತ್ರ ಹೇಳಿದ್ದಾರೆ.
ಲೋಕಸಭೆ ಹಾಗೂ ರಾಜ್ಯಸಭೆ ಕಾರ್ಯಾಲಯಗಳು, ತಮ್ಮ ಸಿಬ್ಬಂದಿಯ ಖಾತೆಗಳಿಗೆ ಮುಂಗಡ ವೇತನ ವರ್ಗಾಯಿಸುವಂತೆ ಶಾಖೆಯನ್ನು ಕೇಳಿರಬಹುದು. ಇತರರಿಗಾಗುತ್ತಿರುವಂತೆ ತಮ್ಮ ಸಿಬ್ಬಂದಿಗೆ ತೊಂದರೆಯಾಗಬಾರದೆಂದು ಅವು ನಗದಿಗಾಗಿ ಕೇಳಿರಬಹುದೆಂದು ಎಸ್‌ಬಿಐಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ.
ಸರಕಾರವು ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಮುಂದೆ ಬರಬೇಕು. ಅಲ್ಲದೆ, ಒಂದೇ ಶಾಖೆಯಿಂದ ರೂ.5 ಕೋಟಿ ಹಿಂದೆಗೆತವನ್ನು ಸಮರ್ಥಿಸಲು ಕಷ್ಟವಾಗಬಹುದು. ಈ ಬಗ್ಗೆ ಆರ್‌ಬಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆಯೆಂದು ಅವರು ತಿಳಿಸಿದ್ದಾರೆ.
ಲೋಕಸಭೆ ಕಾರ್ಯಾಲಯದ ವಕ್ತಾರರೊಬ್ಬರು ಇದನ್ನು ಖಚಿತಪಡಿಸಿದ್ದಾರೆ. ನಾನ್‌ಗಜೆಟೆಡ್ ನೌಕರರಿಗೆ ನವೆಂಬರ್ ತಿಂಗಳ ಮುಂಗಡ ವೇತನ ನೀಡುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಖೆಯ ಸುತ್ತೋಲೆಯಂತೆ ನಗದು ಹಣಕ್ಕೆ ಮನವಿ ಮಾಡಲಾಗಿದೆಯೆಂದು ಅವರು ಹೇಳಿದ್ದಾರೆ.







