ಉಡುಪಿ: ಜಿಲ್ಲಾಮಟ್ಟದ ಯುವಜನೋತ್ಸವ

ಉಡುಪಿ, ನ.20: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ ಮಟ್ಟದ ಯುವಜನೋತ್ಸವ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿಂದು ನಡೆಯಿತು.
ಉತ್ಸವವನ್ನು ಉದ್ಘಾಟಿಸಿದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಯುವ ಸಮುದಾಯಕ್ಕೆ ಸರಕಾರ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಪ್ರೋತ್ಸಾಹ ನೀಡುತ್ತಿದ್ದರೂ ಯುವ ಜನತೆ ಇದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಂತಹ ಸ್ಪರ್ಧೆಗಳಲ್ಲಿ ಯುವ ಸಮುದಾಯ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವ ಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.
ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲಾ ಮಟ್ಟದ ವಿಜೇತರು ಡಿಸೆಂಬರ್ ಮೊದಲ ವಾರದಲ್ಲಿ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ತಿಳಿಸಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿದರು. ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಕಾಶ್ ಕ್ರಮಧಾರಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಜಾನಪದ ನೃತ್ಯ, ಹಾಡು, ನಾಟಕ, ಶಾಸ್ತ್ರೀಯ ಗಾಯನ, ವಾದ್ಯ, ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ನೃತ್ಯ, ಆಶುಭಾಷಣ ಸ್ಪರ್ಧೆಗಳು ನಡೆದವು. ಇದರಲ್ಲಿ ಜಿಲ್ಲೆಯಲ್ಲಿ ನೂರಾರು ಯುವಕ-ಯುವತಿಯರು ಪಾಲ್ಗೊಂಡರು.







