ಜ್ಞಾನದಿಂದ ದೊರಕುವ ತೃಪ್ತಿ ಶಾಶ್ವತ: ಡಾ.ಹೆಗ್ಗಡೆ

ಉಡುಪಿ, ನ.20: ಅನ್ನ ಪಡೆದವನು ಹಸಿವಾಗುವವರೆಗೆ ತೃಪ್ತನಾಗುತ್ತಾನೆ. ಹಸಿವಾದಾಗ ಮತ್ತೆ ಅತೃಪ್ತನಾಗುತ್ತಾನೆ. ಆದರೆ ಜ್ಞಾನದ ಹಸಿವೆಯಲ್ಲಿರುವವನಿಗೆ ಜ್ಞಾನವನ್ನು ನೀಡಿದಾಗ ಅವನು ಕೊನೆಯವರಗೂ ತೃಪ್ತನಾಗಿರುತ್ತಾನೆ. ಆದ್ದರಿಂದ ಜ್ಞಾನದಾನ ಅತ್ಯಂತ ಪ್ರಶಸ್ತ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಭೋಧಕ ಸಂಸ್ಕೃತ ಸಂಶೋಧನ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಸಂದರ್ಭ ಅವರು ಮಾತನಾಡುತ್ತಿದ್ದರು.
ಜ್ಯೋತಿಷ್ಯ ಎಂಬುದು ಭಾರತದ ಉನ್ನತವಾದ ಶಾಸ್ತ್ರ. ಅದರಲ್ಲಿ ವೈಜ್ಞಾನಿಕವಾದ ಅನೇಕ ಅಂಶಗಳು ಅಡಕವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯದ ಕುರಿತು ತಪ್ಪುಕಲ್ಪನೆಗಳು ಕೇಳಿಬರುತ್ತಿವೆ. ಆದರೆ ಮುಂದಿನ ಪೀಳಿಗೆಗೆ ಜ್ಯೋತಿಷ್ಯದ ನಿಜವಾದ ಆಂತರ್ಯವು ತಿಳಿಯಬೇಕಿದೆ ಎಂದರು.
ಸಂಶೋಧನ ಕೇಂದ್ರದಲ್ಲಿ ನಡೆಯುತ್ತಿರುವ ಜ್ಯೋತಿಷ್ಯ ವಿಶ್ವಕೋಶ ಯೋಜನೆಗೆ ಒಂದು ಕೋ.ರೂ. ಧನಸಹಾಯ ನೀಡಿರುವ ಹಿನ್ನೆಲೆಯಲ್ಲಿ ಅವರು ಅದರ ಕಾರ್ಯವನ್ನು ಪರಿಶೀಲಿಸಿದರು. ಜ್ಯೋತಿಷ್ಯ ವಿಭಾಗದ ಅಧ್ಯಕ್ಷ ಪ್ರೊ.ಸಾಲಿಗ್ರಾಮ ಶ್ರೀನಿವಾಸ ಅಡಿಗ ಯೋಜನೆಯ ಸಮಗ್ರ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ವೀರೇಂದ್ರ ಹೆಗ್ಗಡೆ ಅವರಿಗೆ ಜ್ಯೋತಿಷ್ಯ ವಿಶ್ವಕೋಶದ ಪ್ರಾಯೋಗಿಕ ಪ್ರತಿಕೃತಿಯನ್ನು ನೀಡಲಾಯಿತು. ವೇದಾಂತ ವಿಭಾಗಾಧ್ಯಕ್ಷ ಪ್ರೊ.ಸಗ್ರಿ ರಾಘವೇಂದ್ರ ಉಪಾಧ್ಯಾಯ, ಕಾರ್ಯದರ್ಶಿ ರತ್ನಕುಮಾರ್, ಖಜಾಂಚಿ ಪದ್ಮನಾಭ ಭಟ್ ಮತ್ತಿತರರು ಉಪಸ್ಥಿತರಿದ್ದರು.







