ರಕ್ತದಾನ ಮಹತ್ವದ ಬಗ್ಗೆ ಜನತೆ ಅರಿಯಬೇಕು: ಡಾ.ಕಿಶೋರ್ ಕುಮಾರ್

ಕೊಂಚಾಡಿ, ನ.21: ಶಿಕ್ಷಣ ಸಂಸ್ಥೆಗಳು ಮತ್ತು ಸಂಘಟನೆಗಳು ಮಾಧ್ಯಮಗಳ ಸಹಕಾರದೊಂದಿಗೆ ರಕ್ತದಾನದ ಮಹತ್ವದ ಬಗ್ಗೆ ಸಮಾಜಕ್ಕೆ ವ್ಯಾಪಕವಾಗಿ ಬಿತ್ತರಿಸಬೇಕು. ತನ್ಮೂಲಕ ಜನತೆ ರಕ್ತದಾನ ಮಹತ್ವದ ಬಗ್ಗರ ಅರಿಯಬೇಕು. ಇದರಿಂದಾಗಿ ಅನಿವಾರ್ಯ ಸಂಧರ್ಭದಲ್ಲಿ ರಕ್ತದ ಕೊರತೆಯಿಂದ ಸಂಭವಿಸುವ ಅವಘಢಗಳನ್ನು ತಪ್ಪಿಸಬಹುದು ಎಂದು ಸ್ಥಳೀಯ ಖ್ಯಾತ ವೈದ್ಯ ಡಾ. ಎನ್. ವಿ. ಕಿಶೋರ್ ಕುಮಾರ್ ರವರು ಅಭಿಪ್ರಾಯಪಟ್ಟರು. ಅವರು ಡಿವೈಎಫ್ಐ ಯೆಯ್ಯಾಡಿ-ಕೊಂಚಾಡಿ ಘಟಕ ಮತ್ತು ವೀರ ಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದೊಂದಿಗೆ ಶ್ರೀರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ದಿವಂಗತ ಕರ್ಮಿಕಂಡ ಭೋಜ ದೇವಾಡಿಗ ಸ್ಮರಣಾರ್ಥ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಸಿಪಿಐ(ಎಂ) ಪಕ್ಷದ ಮುಖಂಡ ಕಾಂ. ಕೃಷ್ಣಪ್ಪ ಕೊಂಚಾಡಿಯವರು ವಹಿಸಿದ್ದರು. ವೇದಿಕೆಯಲ್ಲಿ ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಕೆ. ಹರೀಶ್ಚಂದ್ರ, ಸುಷ್ಮಿತಾ ಮೋಟಾರ್ಸ್ ನ ಮಾಲಕರಾದ ಶ್ರೀ ನಾಗೇಶ್ ಕೊಪ್ಪಲಕಾಡು, ಶ್ರೀ ವಿಶ್ವನಾಥ ದೇವಾಡಿಗ ಕರ್ಮಿಕಂಡ, ಡಿವೈಎಫ್ಐನ ಜಿಲ್ಲಾ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯರಾಗಿರುವ ಕಾಂ. ದಯಾನಂದ ಶೆಟ್ಟಿ ಮತ್ತು ಶ್ರೀರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಪಿ. ರಾವ್ ಉಪಸ್ಥಿತರಿದ್ದರು. ರವಿಚಂದ್ರ ಕೊಂಚಾಡಿ ಸ್ವಾಗತಿಸಿದರು. ಕ್ರಿಸ್ಟೋಫರ್ ಕಾರ್ಯಕ್ರಮ ನಿರೂಪಿಸಿ,
ನವೀನ್ ಬೊಲ್ಪುಗುಡ್ಡೆ ವಂದಿಸಿದರು. ರಕ್ತದಾನ ಶಿಬಿರದಲ್ಲಿ 77 ಜನರು ರಕ್ತದಾನ ಮಾಡಿದರು.







