ಬಡವರಿಗೆ ಭೂಮಿ ಕೊಡಿಸಲು ಹೋರಾಟಕ್ಕಿಳಿದ ಹಿರಿಯ ಜೀವ!

ಬೆಳಗಾವಿ, ನ.21: ಘನತೆಯಿಂದ ಬಾಳುವಷ್ಟು ಭೂಮಿ, ಗೌರವದಿಂದ ಬದುಕುವಷ್ಟು ವಸತಿ ನೀಡುವ ಕೂಗಿನೊಂದಿಗೆ ಬೆಳಗಾವಿ ಚಳಿಗಾಲದ ಅಧಿವೇಶನ ಮುನ್ನಾದಿನ ಸುವರ್ಣಸೌಧದದ ಬಳಿಯ ಸುವರ್ಣಗಾರ್ಡ್ ನ್ ನಲ್ಲಿ ಅಹೋರಾತ್ರಿ ಧರಣಿ ನಡೆಯಿತು.
ಊಳುವ ಜಮೀನು ಬಲಾಢ್ಯ ಧನಿಕರ ಕೈಯಲ್ಲಿದೆ. ನಿಜವಾಗಿಯೂ ದುಡಿಯುವ ರೈತರಿಗೆ ತುಂಡು ಭೂಮಿಯೂ ಇಲ್ಲ. ಜತೆಗೆ ಇರಲು ಸೂರು ಇಲ್ಲ ಎಂಬ ಕೂಗು ಬೆಳಗಾವಿ ಸುವರ್ಣಸೌಧದ ಎದುರು ಮಾರ್ಧನಿಸಿ ಆಳುವ ಸರಕಾರಗಳ ವಿರುದ್ದ ಆಕ್ರೋಶ ವ್ಯಕ್ತವಾಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ನಡೆದ ಧರಣಿಗೆ ರೈತ, ಕನ್ನಡಪರ ಹಾಗೂ ಸಾಮಾಜಿಕ ಸಂಘಟನೆಗಳು ಸಾತ್ ನೀಡಿದವು. ಎಲ್ಲರಿಗೂ ದುಡಿಯಲು ಭೂಮಿ, ಸಮಾನ ಜೀವನ ನಡೆಸುವ ಹಕ್ಕನ್ನು ಆಳುವ ಸರಕಾರಗಳು ಖಾತರಿಪಡಿಸಬೇಕು ಎಂದು ಎಚ್.ಎಸ್.ದೊರೆಸ್ವಾಮಿ ಆಗ್ರಹಿಸಿದರು. ಸಿದಗೌಡ ಮೋದಗಿ, ಕಲ್ಯಾಣರಾವ್ ಮುಚಳಂಬಿ, ಸುಜಿತ ಮುಳಗುಂದ, ಶ್ರೀನಿವಾಸ ತಾಳೂಕರ ಹಾಗೂ ರಾಜ್ಯದ ಉದ್ದಗಲದಿಂದ ಬಂದಿದ್ದ ಜನತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





