ನಕಲಿ ನಾಣ್ಯ ಜಾಲ ಬಯಲು: ಪ್ರತಿ ನಾಣ್ಯದಲ್ಲಿ ಇವರಿಗೆ ಲಾಭವೆಷ್ಟು ಗೊತ್ತೇ ?

ಹೊಸದಿಲ್ಲಿ, ನ.21: ನಕಲಿ ನಾಣ್ಯಗಳನ್ನು ತಯಾರಿಸುತ್ತಿದ್ದ ಮೂರು ಫ್ಯಾಕ್ಟರಿಗಳಿಗೆ ಇತ್ತೀಚೆಗೆ ನಡೆದ ದಾಳಿಗಳ ನಂತರದ ತನಿಖೆಯಿಂದ ಕಂಡುಕೊಂಡಂತೆ ಆರೋಪಿಗಳು ನಕಲಿ ನಾಣ್ಯಗಳನ್ನು ದಿಲ್ಲಿ ಹೊರವಲಯದ ತರಕಾರಿ ಮಾರುಕಟ್ಟೆಗಳು, ಮಾಲ್ ಗಳು, ಟೋಲ್ ಬೂತುಗಳಲ್ಲಿ ಚಲಾವಣೆ ಮಾಡುತ್ತಿದ್ದರು. ನಾಣ್ಯಗಳು ಹೆಚ್ಚಾಗಿ ಅಗತ್ಯವಿರುವ ಅಂಗಡಿಯವರಿಗೆ ಈ ನಕಲಿ ನಾಣ್ಯಗಳನ್ನು ಅವರು ಪೂರೈಸುತ್ತಿದ್ದರೆನ್ನಲಾಗಿದೆ. ಪ್ರತಿ 10 ರೂ ಮೌಲ್ಯದ ನಾಣ್ಯಕ್ಕೆ ಅವರು ಏಳು ರೂಪಾಯಿ ಲಾಭ ಗಳಿಸುತ್ತಿದ್ದರು. ಈ ನಾಣ್ಯ ಪಡೆದ ಹೆಚ್ಚಿನವರಿಗೆ ಅವು ನಕಲಿ ನಾಣ್ಯ ಎಂದು ತಿಳಿದಿರಲಿಲ್ಲ.
ಆರೋಪಿಗಳು ತಾವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬೇರೆ ಯಾವುದಾದರೂ ಬ್ಯಾಂಕಿನ ಉದ್ಯೋಗಿಗಳೆಂದು ತಮ್ಮನ್ನು ಪರಿಚಯಿಸುತ್ತಿದ್ದರು. ಅವರಲ್ಲೊಬ್ಬನಾದ ನರೇಶ್ ಕುಮಾರ್ ತಾನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಉದ್ಯೋಗಿ ಎಂದು ಹೇಳಿಕೊಳ್ಳುತ್ತಿದ್ದ. ಆತನ ಕಾರನ್ನು ನಿಲ್ಲಿಸಿ ಗುರುತು ಪತ್ರ ತೋರಿಸಲು ಹೇಳಿದಾಗ ಆತ ನಿರಾಕರಿಸಿದ್ದನೆನ್ನಲಾಗಿದೆ.
ಪೊಲೀಸರು ಇಲ್ಲಿಯ ತನಕ ಈ ಜಾಲದ ಒಬ್ಬಳು ಮಹಿಳೆ ಸಹಿತ ಐದು ಮಂದಿಯನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳ ಹಾಗೂ ಆರ್ ಬಿ ಐ ಅಧಿಕಾರಿಗಳು ದೆಹಲಿ ಪೊಲೀಸರನ್ನು ಭೇಟಿಯಾಗಿ ಬಂಧಿತರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಈ ನಕಲಿ ನಾಣ್ಯ ಜಾಲದ ರೂವಾರಿಗಳೆನ್ನಲಾದ ಲುಥ್ರಾ ಸಹೋದರರು ತನಗೆ ಈ ನಾಣ್ಯಗಳ ಪ್ಯಾಕೆಟುಗಳನ್ನು ಗ್ರಾಹಕರಿಗೆ ಪೂರೈಸಲು ಹೇಳಿದ್ದರು ಎಂದು ಆತ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದನೆನ್ನಲಾಗಿದೆ. ನರೇಶ್ ನನ್ನು ಬಂಧಿಸಿದಾಗ ಆತನ ಬಳಿ ಹತ್ತು ರೂಪಾಯಿಯ ನಾಣ್ಯಗಳ ಹಲವು ಪ್ಯಾಕೆಟ್ಟುಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಕಲಿ ನಾಣ್ಯ ಜಾಲಕ್ಕೆ ಅಂತಾರಾಷ್ಟ್ರೀಯ ನಂಟೂ ಇದೆ ಎಂದು ತಿಳಿದು ಬಂದಿದೆ







