ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿ ಜಯಿಸಿದ ಮರ್ರೆ
ಫೈನಲ್‌ನಲ್ಲಿ ಎಡವಿದ ಜೊಕೊವಿಕ್

ಲಂಡನ್, ನ.21: ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಬ್ರಿಟನ್‌ನ ಮರ್ರೆ ಮಾಜಿ ವಿಶ್ವದ ನಂ.1 ಆಟಗಾರ ಜೊಕೊವಿಕ್‌ರನ್ನು 6-3, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಇದೇ ಮೊದಲ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಮರ್ರೆ ಈ ವರ್ಷ ಜಯಿಸಿದ 9ನೆ ಪ್ರಶಸ್ತಿ ಇದಾಗಿದೆ. ಮರ್ರೆ ಈಗಾಗಲೆ ವಿಂಬಲ್ಡನ್ ಪ್ರಶಸ್ತಿ ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ.
‘‘ಇಂತಹ ಪ್ರತಿಷ್ಠಿತ ಪಂದ್ಯದಲ್ಲಿ ನೊವಾಕ್ ವಿರುದ್ಧ ಆಡುವುದೇ ಒಂದು ವಿಶೇಷ. ನಾವಿಬ್ಬರು ಈ ಹಿಂದೆ ಗ್ರಾನ್‌ಸ್ಲಾಮ್ ಫೈನಲ್ಸ್ ಹಾಗೂ ಒಲಿಂಪಿಕ್ಸ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದೆವು. ಇದೀಗ ಪ್ರಶಸ್ತಿ ಜಯಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ವಿಶ್ವದ ನಂ.1 ಆಟಗಾರನಾಗಿರುವುದು ತುಂಬಾ ವಿಶೇಷವಾದುದು. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ’’ ಎಂದು ಮರ್ರೆ ಪ್ರತಿಕ್ರಿಯಿಸಿದ್ದಾರೆ.
ಥೇಮ್ಸ್ ನದಿ ದಡದಲ್ಲಿ ನಡೆಯುವ ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಜೊಕೊವಿಕ್ ಆಡಿರುವ 23 ಪಂದ್ಯಗಳ ಪೈಕಿ 22ರಲ್ಲಿ ಜಯ ಸಾಧಿಸಿದ್ದರು. ವಿಶ್ವ ರ್ಯಾಂಕಿಂಗ್‌ನಲ್ಲಿ ಮರ್ರೆಗೆ 9000 ಅಂಕ ಮುನ್ನಡೆಯನ್ನು ಬಿಟ್ಟುಕೊಟ್ಟಿರುವ ಜೊಕೊವಿಕ್ ಈ ವರ್ಷ ಫ್ರೆಂಚ್ ಓಪನ್ ಸಹಿತ ಒಟ್ಟು 7 ಪ್ರಶಸ್ತಿಗಳನ್ನು ಜಯಿಸಿದ್ದರು.







