ಪರಲೋಕ ರಕ್ಷಣೆಗಾಗಿ ಇಹಲೋಕದಲ್ಲಿ ದಾರಿಯನ್ನು ಕಂಡುಕೊಳ್ಳಿ: ಯು.ಕೆ. ಮದನಿ
ಮುದುಂಗಾರುಕಟ್ಟೆ ಬುರ್ದಾ ಮಜ್ಲಿಸ್

ಉಳ್ಳಾಲ, ನ.21: ಪರಲೋಕ ರಕ್ಷಣೆಗಾಗಿ ದಾರಿಯನ್ನು ಇಹಲೋಕದಲ್ಲಿ ಕಂಡುಕೊಳ್ಳಬೇಕು. ಧರ್ಮದ ಮೇಲೆ ಪ್ರೀತಿ ವಿಶ್ವಾಸ ನಂಬಿಕೆ ಇದ್ದುಕೊಂಡು ಕಾರ್ಯ ಚಟುವಟಿಕೆ ಮಾಡಿದಲ್ಲಿ ಪರಲೋಕದಲ್ಲಿ ರಕ್ಷಣೆ ಹೊಂದಲು ಸಾಧ್ಯ ಎಂದು ಯು.ಕೆ. ಮದನಿ ಹೇಳಿದರು.
ಅವರು ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖೆ ಇದರ ಆಶ್ರಯದಲ್ಲಿ ಶನಿವಾರ ಮುದುಂಗಾರುಕಟ್ಟೆಯಲ್ಲಿ ನಡೆದ ಬುರ್ದಾ ಮಜ್ಲಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಬದುಕು ಕಂಡುಕೊಳ್ಳಲು ಪ್ರೀತಿ ವಿಶ್ವಾಸದ ಅಗತ್ಯತೆ ಬಹಳಷ್ಟಿದೆ. ಆದರೆ ಪ್ರಸಕ್ತ ಇದನ್ನು ನಾವು ಕಳಕೊಳ್ಳುತ್ತಿದ್ದೇವೆ. ಕ್ಷುಲ್ಲಕ ವಿಚಾರಕ್ಕೆ ಘರ್ಷಣೆಯಂತಹ ಘಟನೆಗಳು ನಡೆದು ಅಶಾಂತಿಯ ವಾತಾವರಣ ಸಿಗುತ್ತದೆ. ಪ್ರೀತಿ ವಿಶ್ವಾಸ, ಸೌಹಾರ್ದತೆ, ಸಹನೆ ನಮ್ಮಲ್ಲಿ ಇಲ್ಲದಿದ್ದರೆ ರಕ್ಷಣೆ ಪರಲೋಕದಲ್ಲಿ ಸಿಗದು. ಸೌಹಾರ್ದತೆ, ಸಹನೆ ಜೀವನದಲ್ಲಿ ಬೆಳಸಿಕೊಂಡು ಜೀವಿಸಬೇಕೆಂದು ಕರೆ ನೀಡಿದರು.
ಬಳಿಕ ಅಬ್ದುಲ್ ಲತೀಫ್ ಕಾಂದಪುರಂರವರ ನೇತೃತ್ವದಲ್ಲಿ ನಡೆದ ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ನಿಝಾರ್ ಖುತುಬಿ ಮಡವೂರು ಮಲಯಾಳಂ ಹಾಡು ಹಾಡಿದರು. ಖಾರಿಅ್ ಮುಹಮ್ಮದ್ ಬವಾಝೀರ್ ಖಾದಿರ್ ಶರ್ಫಿ ಉರ್ದು ಹಾಡು ಹಾಡಿದರು. ಮಾಸ್ಟರ್ ಶಮ್ಮಾಸ್ ಕಾಂದಪುರಂ, ಮಾಸ್ಟರ್ ಸಿನಾನ್ ಕಾಸರಗೋಡ್ ಮಲಯಾಳಂ ಹಾಡು ಹಾಡಿದರು. ಮಾಸ್ಟರ್ ಆದಿಶ್ ಬಳಗ ಕವಾಲಿ ನಡೆಸಿದರು.
ಮುದುಂಗಾರುಕಟ್ಟೆ ಖತೀಬ್ ಹೈದರ್ ಹಿಮಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಮ್ತಿಯಾಝ್ ಕಿರಾಅತ್ ಪಠಿಸಿದರು. ಹಮೀದ್ ಕೊಡುಂಗಾಯಿ, ಸಾಮಣಿಗೆ ಮದನಿ ಮಾತನಾಡಿದರು. ಎಸ್ಸೆಸ್ಸೆಫ್ ಉಪಾಧ್ಯಕ್ಷ ಜಮಾಲ್ ಸಖಾಫಿ ಅತಿಥಿಗಳನ್ನು ಸ್ವಾಗತಿಸಿದರು.





