ಪೃಥ್ವಿ-2 ಕ್ಷಿಪಣಿಗಳ ಅವಳಿ ಪರೀಕ್ಷೆ ಯಶಸ್ವಿ

ಬಾಲ್ಸೋರ್, ನ.21: ಭಾರತವಿಂದು ಸ್ವದೇಶಿ ನಿರ್ಮಿತ, ಪರಮಾಣು ಶಕ್ತ ಪೃಥ್ವಿ-2 ಕ್ಷಿಪಣಿಯ ಎರಡು ಪರೀಕ್ಷಾ ಪ್ರಯೋಗಗಳನ್ನು ಬೆನ್ನುಬೆನ್ನಿಗೆ ಯಶಸ್ವಿಯಾಗಿ ನಡೆಸಿದೆ. ಭೂಸೇನೆಯ ಬಳಕೆದಾರ ಪರೀಕ್ಷೆಯ ಭಾಗವಾಗಿ ಒಡಿಶಾದ ಚಂಡಿಪುರದ ಪರೀಕ್ಷಾ ವಲಯದಿಂದ ಈ ಕ್ಷಿಪಣಿಗಳನ್ನು ಉಡಾಯಿಸಲಾಯಿತು.
350 ಕಿ.ಮೀ. ವ್ಯಾಪ್ತಿಯ 500 ಹಾಗೂ 1000 ಕಿ.ಗ್ರಾಂ ಸಿಡಿತಲೆಗಳನ್ನೊಯ್ಯುವ ಸಾಮರ್ಥ್ಯದ ನೆಲದಿಂದ ನೆಲಕ್ಕೆ ನೆಗೆಯುವ ಎರಡು ಕ್ಷಿಪಣಿಗಳ ಪರೀಕ್ಷೆಯನ್ನು ಮುಂಜಾನೆ ಸುಮಾರು 9:30ರ ವೇಳೆ ಸಮಗ್ರ ಪರೀಕ್ಷಾ ವಲಯದ 3ನೆ ಉಡಾವಣಾ ಸಂಕೀರ್ಣದಿಂದ ಸಂಚಾರಿ ಉಡಾವಕದ ಮೂಲಕ ಬೆನ್ನುಬೆನ್ನಿಗೆ ಯಶಸ್ವಿಯಾಗಿ ನಡೆಸಲಾಯಿತೆಂದು ರಕ್ಷಣಾ ಮೂಲಗಳು ತಿಳಿಸಿವೆ.
ಕ್ಷಿಪಣಿಯಲ್ಲಿ ದ್ರವ ಇಂಧನ ಚಾಲಿತ ಅವಳಿ ಯಂತ್ರಗಳಿದ್ದು, ಅತ್ಯಾಧುನಿಕ ನಿರ್ದೇಶನ ವ್ಯವಸ್ಥೆಯಿಂದ ಗುರಿಯನ್ನು ಭೇದಿಸುತ್ತದೆ.
Next Story





