ಮೂರನೆ ದಿನವೂ ಸಂಸತ್ತು ಅಸ್ತವ್ಯಸ್ತ

ಹೊಸದಿಲ್ಲಿ, ನ.21: ನೋಟು ರದ್ದತಿಯ ಬಳಿಕ ಬ್ಯಾಂಕ್‌ಗಳ ಸರತಿಯ ಸಾಲುಗಳಲ್ಲಿ ಮೃತಪಟ್ಟವರಿಗೆ ಸಂತಾಪ ನಿರ್ಣಯವನ್ನು ಅಂಗೀಕರಿಸಬೇಕು ಹಾಗೂ ಮತ ವಿಭಜನೆಗೆ ಅವಕಾಶವಿರುವ ನಿಯಮದನ್ವಯ ಚರ್ಚೆ ನಡೆಯಬೇಕೆಂದು ಆಗ್ರಹಿಸಿ ರಾಜ್ಯಸಭೆಯ ವಿಪಕ್ಷಗಳು ಕೋಲಾಹಲವೆಬ್ಬಿಸಿದ ಕಾರಣ ಇಂದು ಸಹ ಸಂಸತ್ ಕಲಾಪಕ್ಕೆ ಅಡಚಣೆಯಾಗಿದೆ.
ಸುಮಾರು 70 ಮಂದಿಯ ಸಾವಿಗೆ ಸಂತಾಪ ನಿರ್ಣಯ ಕೈಗೊಳ್ಳದೆ ನೋಟು ರದ್ದತಿಯ ಕುರಿತು ಚರ್ಚೆಗೆ ಅವಕಾಶ ನೀಡುವುದಿಲ್ಲವೆಂದು ಒಗ್ಗಟ್ಟಾದ ವಿಪಕ್ಷಗಳು ಒತ್ತಿ ಹೇಳಿರುವುದು ಮೇಲ್ಮನೆಯ ಕಲಾಪಕ್ಕೆ ಹೊಸ ಆಯಾಮ ನೀಡಿದೆ.
ಲೋಕಸಭೆಯಲ್ಲೂ ವಿಪಕ್ಷಗಳು ನೋಟು ರದ್ದತಿಯ ಕುರಿತು ನಿಲುವಳಿ ಗೊತ್ತುವಳಿ ಹಾಗೂ ಮತ ವಿಭಜನೆಗೆ ಅವಕಾಶವಿರುವ ನಿಯಮದನ್ವಯ ಚರ್ಚೆಗೆ ಆಗ್ರಹಿಸಿದುದರಿಂದಾಗಿ ಸತತ ಮೂರನೆಯ ದಿನವಾದ ಇಂದು ಯಾವುದೇ ಕಲಾಪ ನಡೆಯಲಿಲ್ಲ.
ಕಾಂಗ್ರೆಸ್, ಬಿಎಸ್ಪಿ, ಟಿಎಂಸಿ ಹಾಗೂ ಸಿಪಿಐ ಪಕ್ಷಗಳು ಸಂತಾಪ ನಿರ್ಣಯಕ್ಕಾಗಿ ಆಗ್ರಹಿಸಿದವು.
ವಿಪಕ್ಷಗಳು ನೋಟು ರದ್ದತಿ ಚರ್ಚೆಯಿಂದ ಪಲಾಯನ ಮಾಡುತ್ತಿವೆಯೆಂದು ಸದನ ನಾಯಕ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದರು.
ಒಳಿತು ಕೆಡುಕುಗಳ ಬಗ್ಗೆ ಚರ್ಚೆಯಲ್ಲಿ ಹೊರಗೆ ಬರುತ್ತದೆ. ವಿಪಕ್ಷಗಳು ಚರ್ಚೆಯಿಂದ ಪಲಾಯನ ಮಾಡುವುದೇಕೆ? ವಿಪಕ್ಷಗಳು ಚರ್ಚೆಗೆ ಸಿದ್ಧವಿಲ್ಲ ಹಾಗೂ ಸದನವನ್ನು ಅಡ್ಡಿಪಡಿಸಲು ಹೊಸ ನೆಪದೊಂದಿಗೆ ಮುಂದೆ ಬಂದಿವೆಯೆಂಬುದು ಇದರಿಂದ ಸ್ಪಷ್ಟವಾಗುತ್ತದೆಯೆಂದು ಸದನದ ಅಂಗಳದಲ್ಲಿ ವಿಪಕ್ಷೀಯರ ಘೋಷಣೆಗಳ ನಡುವೆಯೇ ಜೇಟ್ಲಿ ಹೇಳಿದರು.
ನಿಯಮ 267ರನ್ವಯ ಕಲಾಪ ಅಮಾನತು ನೋಟಿಸನ್ನು ಚಳಿಗಾಲದ ಅಧಿವೇಶನದ ಮೊದಲ ದಿನವೇ ಅಂಗೀಕರಿಸಲಾಗಿದೆ. ಚರ್ಚೆ ಆರಂಭವಾಗಿದೆ. ಸಾವುಗಳ ಕುರಿತಾದ ವರದಿಯ ಬಗ್ಗೆ ಚರ್ಚೆಯ ವೇಳೆ ಪ್ರಸ್ತಾಪವಾಗುತ್ತದೆ. ಸರಕಾರ ಅದಕ್ಕೆ ಉತ್ತರ ನೀಡುತ್ತದೆಂದು ಅವರು ತಿಳಿಸಿದರು.







