ತರಬೇತಿಗೆ ಹಾಜರಾಗಿ ಇಲ್ಲವೇ ಐಎಎಸ್ ದೃಢೀಕರಣ ಕಳೆದುಕೊಳ್ಳಿ ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

ಹೊಸದಿಲ್ಲಿ, ನ.21: ಕಡ್ಡಾಯ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಿ ಇಲ್ಲವೇ ಭಾರತೀಯ ಆಡಳಿತ ಸೇವೆಯಲ್ಲಿ(ಐಎಎಸ್) ದೃಢೀಕರಣವನ್ನು ಕಳೆದುಕೊಳ್ಳಲು ಸಿದ್ಧರಾಗಿ ಎಂಬ ಕಠಿಣ ಎಚ್ಚರಿಕೆಯನ್ನು ವಿವಿಧ ರಾಜ್ಯಗಳ ನಾಗರಿಕ ಸೇವೆಗಳ 100ಕ್ಕೂ ಹೆಚ್ಚು ಭಡ್ತಿ ಪಡೆದ ಅಧಿಕಾರಿಗಳಿಗೆ ನೀಡಲಾಗಿದೆ.
ಅಂತಹ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ತರಬೇತಿಯನ್ನು ಖಚಿತಪಡಿಸುವಂತೆ ಸೂಚಿಸಿ ಗುಜರಾತ್ ಮಧ್ಯಪ್ರದೇಶ, ಚತ್ತೀಸ್‌ಗಡ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪತ್ರ ಬರೆದಿದೆ.
ವಿವಿಧ ರಾಜ್ಯಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕೆಲವು ಅಧಿಕಾರಿಗಳು, ಮಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡಮಿಯಲ್ಲಿ ಆ.1ರಿಂದ ಸೆ.10ರ ವರೆಗೆ ನಡೆದಿದ್ದ ತರಬೇತಿಲ್ಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಹೊರಟಿದೆ.
ಅದಕ್ಕಾಗಿ ವಿವಿಧ ರಾಜ್ಯ ಸರಕಾರಗಳ 104 ಮಂದಿ ಅಧಿಕಾರಿಗಳನ್ನು ಪಶ್ಚಿಮಬಂಗಾಳದ ಆಡಳಿತ ತರಬೇತಿ ಸಂಸ್ಥೆಯಲ್ಲಿ 2017ರ ಜ.16ರಿಂದ ಫೆ.24ರ ವರೆಗೆ ನಡೆಯಲಿರುವ ತರಬೇತಿ ಕಾರ್ಯಕ್ರಮಕ್ಕೆ ನಾಮಕರಣ ಮಾಡಲು ನಿರ್ಧರಿಸಲಾಗಿದೆಯೆಂದು ಇಲಾಖೆ ಹೇಳಿದೆ.
ಐಎಎಸ್‌ಗೆ ಸೇರಿಸಲ್ಪಟ್ಟಿರುವ ಅಧಿಕಾರಿಗಳ ಹಾಗೂ ಅವರ ರಾಜ್ಯಗಳ ಲಾಭಕ್ಕಾಗಿ ಈ ತರಬೇತಿ ಪಡೆಯಲು ಇದು ಒಮ್ಮೆ ಮಾತ್ರ ದೊರೆಯುವ ಅವಕಾಶವಾಗಿದೆಯೆಂದು ಅದು ತಿಳಿಸಿದೆ.







