1 ಲಕ್ಷ ಡಾಲರ್. ಸಂಬಳ ಕೊಡುತ್ತಾರೆ, ಕೆಲಸ ಕೊಡುವುದಿಲ್ಲ!
ಅಮೆರಿಕ ವಿಶ್ವವಿದ್ಯಾಲಯದ ವಿರುದ್ಧ ಸಿಬ್ಬಂದಿ ದೂರು
ನ್ಯೂಯಾರ್ಕ್, ನ. 21: ತನಗೆ ವರ್ಷಕ್ಕೆ ಒಂದು ಲಕ್ಷ ಡಾಲರ್ (ಸುಮಾರು 68 ಲಕ್ಷ ರೂಪಾಯಿ) ಸಂಬಳ ಕೊಡುತ್ತಾರೆ, ಆದರೆ, ಕೆಲಸವೇ ಕೊಡುತ್ತಿಲ್ಲ ಎಂಬುದಾಗಿ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಶ್ರೀಲಂಕಾ ಸಂಜಾತ ಸಿಬ್ಬಂದಿಯೊಬ್ಬರು ತನ್ನ ಸಂಸ್ಥೆಯ ವಿರುದ್ಧ ದೂರು ನೀಡಿದ್ದಾರೆ.
ಇದರಿಂದಾಗಿ ತನ್ನ ಹೆಚ್ಚಿನ ಸಮಯವನ್ನು ಹಕ್ಕಿಗಳು ಮತ್ತು ಅಳಿಲುಗಳಿಗೆ ಕಾಳು ಹಾಕುತ್ತಾ ಮತ್ತು ಕ್ರಿಕೆಟ್ ನೋಡುತ್ತಾ ಕಳೆಯಬೇಕಾಗಿ ಬಂದಿದೆ ಎಂದು ಅವರು ಹೇಳಿದ್ದಾರೆ.
ಹರೇಂದ್ರ ಹೆರಾಲ್ಡ್ ಸಿರಿಸೇನ ನ್ಯೂಯಾರ್ಕ್ ಸಿಟಿ ವಿಶ್ವವಿದ್ಯಾನಿಲಯವನ್ನು 1995ರಲ್ಲಿ ಸೇರಿದರು. ಆರಂಭಿಕ ವರ್ಷಗಳಲ್ಲಿ ಸಿಟಿ ಟೆಕ್ ಕಾಲೇಜ್‌ನಲ್ಲಿ ಅವರು ಸಲ್ಲಿಸಿದ ಸೇವೆ ಅತ್ಯಂತ ಯಶಸ್ವಿಯಾಗಿತ್ತು.
ಆದರೆ, 2003ರಲ್ಲಿ ಯಾವುದೇ ವಿವರಣೆ ನೀಡದೆ ಅವರ ಸ್ಥಾನಕ್ಕೆ ಅವರ ಕಿರಿಯ ಸಹಾಯಕರೊಬ್ಬರನ್ನು ತರಲಾಯಿತು. ಅವರು ಬಿಲ್ ಮಾಡುವ ಕೆಲಸಕ್ಕೆ ಸೀಮಿತಗೊಂಡರು.
ಅವರಿಗೆ ವರ್ಷದ ಸರಾಸರಿ 30 ದಿನಗಳಲ್ಲಿ ಮಾತ್ರ ಕೆಲಸವಿತ್ತು. ಉಳಿದ 171 ದಿನಗಳನ್ನು ಕೆಲಸವಿಲ್ಲದೆ ಕಳೆಯಬೇಕಾಗಿತ್ತು. ಕಳೆದ 13 ವರ್ಷಗಳಲ್ಲಿ ತನ್ನ ಪೂರ್ಣ ಸಂಬಳವನ್ನು ಅವರು ಪಡೆದಿದ್ದಾರೆ.
ಸಿರಿಸೇನಾರ ವಕೀಲ, ಮಾಜಿ ಸರಕಾರಿ ಅಟಾರ್ನಿ ಜನರಲ್ ಒಲಿವರ್ ಕಾಪೆಲ್, ವಿಶ್ವವಿದ್ಯಾಲಯದ ವಿರುದ್ಧ ವಯೋ ಮತ್ತು ಜನಾಂಗೀಯ ತಾರತಮ್ಯ ಮೊಕದ್ದಮೆಯನ್ನು ಹೂಡಲು ನಿರ್ಧರಿಸಿದ್ದಾರೆ.







