ಉಪ್ಪಳ : ಶರೀಅತ್ ಸಂರಕ್ಷಣಾ ಸಮಾವೇಶ
ಮಂಜೇಶ್ವರ, ನ.21: ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸಿ ಸಮಸ್ತ ಕೇರಳ ಜಂಇಯತುಲ್ ಉಲಮಾ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಬೃಹತ್ ಶರೀಅತ್ ಸಂರಕ್ಷಣಾ ಸಮಾವೇಶ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಸೋಮವಾರ ನಡೆಯಿತು.
ಸಂಜೆ 4 ಘಂಟೆಗೆ ನಯಾಬಝಾರ್‌ನಿಂದ ಉಪ್ಪಳದ ಪೇಟೆತನಕ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಬಳಿಕ ನಡೆದ ನಡೆದ ಶರೀಅತ್ ಸಂರಕ್ಷಣಾ ಸಮಾವೇಶವನ್ನು ಸಮಸ್ತ ಕೇರಳ ಜಂಇಯತುಲ್ ಉಲಮಾ ಕಾಸರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಎಂ.ಉಸ್ತಾದ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಸಮಾನ ನಾಗರಿಕ ಸಂಹಿತೆ ಅಪಾಯಕಾರಿ. ಮುಸ್ಲಿಂ ಶರೀಅತ್ ನಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಹಾಗೂ ಬದಲಾವಣೆಗೆ ಮುಸ್ಲಿಮರು ಒಪ್ಪುವುದಿಲ್ಲ. ಕೇಂದ್ರದ ಮೋದಿ ಸರಕಾರ ತ್ರಿವಳಿ ತಲಾಖ್ ವಿಷಯದೊಂದಿಗೆ ಮುಸ್ಲಿಮರ ಐಕ್ಯತೆಯನ್ನು ಒಡೆಯುವ ಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು. ಎ
ಸ್ಕೆಎಸ್ಸೆಸ್ಸೆಫ್ ರಾಜ್ಯ ಸೀನಿಯರ್ ಉಪಾಧ್ಯಕ್ಷ ಓಣಂಪಳ್ಳಿ ಮುಹಮ್ಮದ್ ಪೈಝಿ ಮಾತನಾಡಿ, ಭಾರತದ ಸಂವಿಧಾನದಲ್ಲಿನ ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಇದನ್ನು ನಾವು ಪ್ರತಿಭಟಿಸುವುದು ಅನಿವಾರ್ಯವಾಗಿದೆ. ಸಮಾನ ನಾಗರಿಕ ಸಂಹಿತೆ ಮೋದಿಯಿಂದಲ್ಲ ಯಾರು ಅಧಿಕಾರಕ್ಕೆ ಬಂದರೂ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಜಿಫ್ರೀ ಮುತ್ತುಕ್ಕೋಯ ತಂಙಳ್ ಪೊಸೋಟ್ ದುಆ ನೆರವೇರಿಸಿದರು. ಪಾತೂರು ಉಸ್ತಾದ್, ಅಬ್ದುಲ್ ಅಕ್ರಂ ಬಾಖವಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಪಂಚಾಯತ್ ಅಧ್ಯಕ್ಷರಾದ ಶಾಹುಲ್ ಹಮೀದ್, ಮಜೀದ್ ಪಾತೂರು, ಸಾಲೂದ್ ನಿಝಾಮಿ, ಸೈಪುಲ್ಲಾ ತಂಙಳ್ ಮೊದಲಾದವರು ಮಾತನಾಡಿದರು. ಕಜೆ ಮುಹಮ್ಮದ್ ಪೈಝಿ ಸ್ವಾಗತಿಸಿದರು.