ಶರೀಯತ್ ಸಂರಕ್ಷಣಾ ಸಮಾವೇಶಕ್ಕೆ ಪುತ್ತೂರಿನಿಂದ 10 ಸಾವಿರ ಮಂದಿ: ನೂರುದ್ದೀನ್ ಸಾಲ್ಮರ
ಪುತ್ತೂರು, ನ.21: ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಶರೀಯತ್ ಸಂರಕ್ಷಣಾ ಸಮಾವೇಶದಲ್ಲಿ ಪುತ್ತೂರಿನಿಂದ ಸುಮಾರು 10 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ವಕೀಲ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶರೀಯತ್ ಸಂರಕ್ಷಣಾ ಸಮಾವೇಶದಲ್ಲಿ ಸುಮಾರು 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಪುತ್ತೂರಿನಿಂದ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಯಾವುದೇ ಸ್ಪಷ್ಟತೆಗಳಿಲ್ಲದೆ ಏಕರೂಪ ಸಿವಿಲ್ ಕಾಯ್ದೆ ಜಾರಿಗೊಳಿಸುವ ಹುನ್ನಾರಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು, ಧರ್ಮ ರಕ್ಷಣೆ ಪ್ರತಿಯೊಬ್ಬರ ಸಂವಿಧಾನ ದತ್ತ ಹಕ್ಕಾಗಿದೆ. ಇದನ್ನು ತಡೆಯುವ ಅಥವಾ ಹಸ್ತಕ್ಷೇಪ ನಡೆಸುವ ಅಧಿಕಾರ ಯಾರಿಗೂ ಇಲ್ಲ. ಯಾರಾದರೂ ಹಸ್ತಕ್ಷೇಪ ಮಾಡಿದಲ್ಲಿ ಪ್ರಶ್ನಿಸುವ ಅವಕಾಶಗಳಿವೆ ಎಂದ ಅವರು ಏಕರೂಪ ಕಾನೂನು ಜಾರಿಯಾದಲ್ಲಿ ಕೇವಲ ಮುಸ್ಲಿಮರಿಗೆ ಮಾತ್ರ ತೊಂದರೆಯಾಗುತ್ತಿಲ್ಲ. ಇದರಿಂದಾಗಿ ಎಲ್ಲಾ ಧರ್ಮಗಳ ವೈಯಕ್ತಿಕ ಬದುಕಿನ ಮೇಲೆ ಹಸ್ತಕ್ಷೇಪವಾಗಲಿದೆ. ಪ್ರತಿಯೊಂದು ಧರ್ಮಗಳಿಗೂ ಮದುವೆ, ಮರಣ, ಆಸ್ತಿ ಹಕ್ಕು ಭಿನ್ನವಾಗಿದೆ. ಇದನ್ನು ಸರಕಾರ ಅರಿತುಕೊಳ್ಳಬೇಕಾಗಿದೆ ಎಂದರು.
ಮದ್ಯಪಾನದಂತಹ ಸಾಮಾಜಿಕ ಪಿಡುಗಿನಿಂದ ಇದೀಗ ಮಹಿಳೆಯರು ಸೇರಿದಂತೆ ಕುಟುಂಬಗಳು ಹೆಚ್ಚು ಸಂಕಷ್ಟ ಎದುರಿಸುತ್ತಿರುವುದರಿಂದ ಸರಕಾರ ಇಂತಹ ಪಿಡುಗು ನಿಷೇಧ ಕಾಯ್ದೆ ಜಾರಿಗೊಳಿಸುವ ಬಗ್ಗೆ ಕಾರ್ಯೋನ್ಮಖವಾಗಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಪಿ. ಬಿ. ಹಸನ್ ಹಾಜಿ, ಸದಸ್ಯ ಅಬ್ದುರ್ರಹ್ಮಾನ್ ಆಝಾದ್, ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಎಲ್.ಟಿ. ರಝಾಕ್ ಹಾಜಿ ಉಪಸ್ಥಿತರಿದ್ದರು.