ಫಲ್ಗುಣಿ ನದಿಯಿಂದ ಅಕ್ರಮ ಮರಳುಗಾರಿಕೆ
ಕಂದಾಯ-ಪೊಲೀಸ್ ಇಲಾಖೆ ದಾಳಿ: 15 ಲಕ್ಷ ರೂ. ವೌಲ್ಯದ ಸೊತ್ತು ವಶ
ಮಂಗಳೂರು, ನ.21: ಮೂಡುಬಿದಿರೆ ಸಮೀಪದ ಮಾರೂರು ಗ್ರಾಮದ ಸಿಮಲ್ಕೆ ಮಣ್ಣಿಹಿತ್ತಿಲು ಎಂಬಲ್ಲಿನ ಪಲ್ಗುಣಿ ನದಿಯಿಂದ ಡ್ರೆಜ್ಜಿಂಗ್ ಮಿಷನ್ ಬಳಸಿ ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆಗೆ ಮೂಡುಬಿದಿರೆ ವಿಶೇಷ ತಹಶೀಲ್ದಾರರು ದಾಳಿ ನಡೆಸಿ ಸುಮಾರು 15 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರವಿವಾರ ಪೂರ್ವಾಹ್ನ 11:05ಕ್ಕೆ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಕೃತ್ಯಕ್ಕೆ ಬಳಸಲಾದ 1 ಹಿಟಾಚಿ ಮಿಷನ್, ಕಬ್ಬಿಣದ ಜಾಲಿ, ಕಬ್ಬಿಣದ ಪೈಪುಗಳು, ಪ್ಲಾಸ್ಟಿಕ್ ಪೈಪುಗಳು, ಕಬ್ಬಿಣದ ಡ್ರಮ್ಮುಗಳು ಮತ್ತು ಡ್ರಮ್ಮುಗಳನ್ನು ಜೋಡಿಸಲು ಅಳವಡಿಸಿದ ಪಟ್ಟಿಗಳು, ಹೊಳೆಯಿಂದ ಅಕ್ರಮವಾಗಿ ಮರಳೆತ್ತಲು ಬಳಸಿದ ಕಬ್ಬಿಣದ ಬೋಟು ಮತ್ತು ಅದರೊಳಗಡೆ ಅಳವಡಿಸಿದ್ದ ಡ್ರಜ್ಜಿಂಗ್ ಮಿಷನ್, ನದಿಯ ದಡದಲ್ಲಿದ್ದ ಶೇಖರಣೆ ಮಾಡಿಟ್ಟ ಸುಮಾರು 10 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಅಂದಾಜು ಮೌಲ್ಯ 15,67,000 ರೂ. ಆಗಿದೆ.
ಆರೋಪಿ ಪ್ರವೀಣ್ ಯಾವುದೇ ಅಧಿಕೃತ ದಾಖಲೆಗಳನ್ನು ಪಡೆಯದೆ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮೂಡುಬಿದಿರೆಯ ಹೋಬಳಿಯ ಕಂದಾಯ ನಿರೀಕ್ಷಕ, ಮಾರೂರು ಗ್ರಾಮಕರಣಿಕರು ಹಾಗೂ ಮೂಡುಬಿದಿರೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ದೇಜಪ್ಪಮತ್ತು ಎ. ಕುಶಾಲಪ್ಪಗೌಡ ಪಾಲ್ಗೊಂಡಿದ್ದರು.





