ಕಾಬಾ ಮೇಲೆ ದೇವತೆಯ ಚಿತ್ರ : ಆರೋಪಿಯ ಬಂಧನ
ಕಠಿಣ ಕ್ರಮಕ್ಕೆ ಆಗ್ರಹ

ಮನಾಮ, ನ. 21 : ಪವಿತ್ರ ಕಾಬಾದ ಮೇಲೆ ಹಿಂದೂ ದೇವತೆ ಕುಳಿತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ ಭಾರತೀಯನನ್ನು ಸೌದಿ ಪೊಲೀಸರು ರಿಯಾದ್ ನಲ್ಲಿ ಬಂಧಿಸಿದ್ದಾರೆ. ಕೃಷಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಈತನಿಗೆ ಸುಮಾರು 40 ವರ್ಷ ವಯಸ್ಸು ಎಂದು ಹೇಳಲಾಗಿದೆ.
" ಈತ ಕಾಬಾವನ್ನು ಅವಮಾನಿಸಿದ್ದು ಮಾತ್ರವಲ್ಲದೆ ತನ್ನ ಕೆಲಸದ ಬಗ್ಗೆ ತನಗೆ ಹೆಮ್ಮೆಯಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದ. ಇಂಟರ್ನೆಟ್ ನಲ್ಲಿ ವೈರಲ್ ಆದ ಈ ಚಿತ್ರಕ್ಕಾಗಿ ಬಂಧಿತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಹಸ್ರಾರು ಮಂದಿ ಆಗ್ರಹಿಸಿದ್ದಾರೆ.
ಕಳೆದ ವರ್ಷ ಮಸ್ಜಿದುಲ್ ಹರಾಮ್ ಅನ್ನು ಹಿಂದೂ ದೇವಸ್ಥಾನವಾಗಿ ಚಿತ್ರಿಸಿದ್ದ ಭಾರತೀಯ ಪ್ರಜೆಯೊಬ್ಬನನ್ನು ಸೌದಿ ಪೊಲೀಸರು ಬಂಧಿಸಿದ್ದರು. ಚಿತ್ರವನ್ನು ಗಮನಿಸಿದ ಸೌದಿ ಪ್ರಜೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ವಿಮಾನ ನಿಲ್ದಾಣದಿಂದ ಬಂಧಿಸಲಾಗಿತ್ತು. ಆಗ ಸಂಬಂಧಿತ ಸಾಮಾಜಿಕ ಜಾಲತಾಣದ ಪುಟ ನನ್ನದೇ ಎಂದು ಒಪ್ಪಿಕೊಂಡಿದ್ದ ಆ ಆರೋಪಿ ಆ ಚಿತ್ರ ನಾನು ಲಿಂಕ್ ಒಂದನ್ನು ಕ್ಲಿಕ್ ಮಾಡಿದಾಗ ತನ್ನಿಂತಾನೇ ಬಂದಿತ್ತು ಎಂದು ಹೇಳಿದ್ದ.
ಆದರೆ ಸೈಬರ್ ಕ್ರೈಮ್ ಕಾನೂನನ್ನು ಆತ ಉಲ್ಲಂಘಿಸಿದ್ದಾನೆ ಎಂದು ಆತನ ಮೇಲೆ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗು 30 ಲಕ್ಷ ರಿಯಾಲ್ ( ಸುಮಾರು ಐದೂವರೆ ಕೋಟಿ ರೂಪಾಯಿ ) ದಂಡ ಪಾವತಿಸಬೇಕಾಗುತ್ತದೆ.







