ಪಂಜಾಬ್ ಕಾಂಗ್ರೆಸ್ ಮೇಲೆ ಕೇಜ್ರಿವಾಲ್ ' ಸರ್ಜಿಕಲ್ ದಾಳಿ'
ಅಮರಿಂದರ್ ಸಿಂಗ್ ಕುರಿತ ಸ್ಪೋಟಕ ದಾಖಲೆ ಬಹಿರಂಗ

ಚಂಡಿಗಡ,ನ.21: ಪಂಜಾಬಿನ ಮಾಜಿ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕ್ಯಾ.ಅಮರಿಂದರ್ ಸಿಂಗ್ ಮತ್ತು ಅವರ ಕುಟುಂಬದ ಸ್ವಿಸ್ ಬ್ಯಾಂಕ್ ಖಾತೆಗಳನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಬಹಿರಂಗಗೊಳಿಸಿದರು.
ತನ್ನ 11 ದಿನಗಳ ಪಂಜಾಬ್ ಪ್ರವಾಸದ ಎರಡನೇ ದಿನವಾದ ಇಂದು ಬಠಿಂಡಾ ಬಳಿಯ ಕೋಟ್‌ಶಮೀರ್‌ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಂಗ್ ಅವರ ಪತ್ನಿ ಮಾಜಿ ಕೇಂದ್ರ ಸಚಿವೆ ಪ್ರಣೀತ್ ಕೌರ್ ಮತ್ತು ಪುತ್ರ ರಣಿಂದರ್ ಸಿಂಗ್ ಅವರು 2005ರಲ್ಲಿ ಒಂದೇ ದಿನ ಸ್ವಿಸ್ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದಿದ್ದರು ಎಂದು ಹೇಳಿದರಲ್ಲದೆ, ಆ ಖಾತೆಗಳ ಸಂಖ್ಯೆಗಳು ಮತ್ತು ವಿವರಗಳನ್ನು ಬಹಿರಂಗಗೊಳಿಸಿದರು.
ಸಿಂಗ್ ಕುಟುಂಬವು ಒಂದು ಟ್ರಸ್ಟ್‌ನ್ನೂ ರಚಿಸಿದ್ದು ತನ್ನ ಅಕ್ರಮ ಹಣವನ್ನು ಅದು ಈ ಟ್ರಸ್ಟ್‌ನಲ್ಲಿ ಹೂಡಿಕೆ ಮಾಡುತ್ತಿದೆ ಎಂದು ಆರೋಪಿಸಿದ ಅವರು,ಅದರ ಬ್ಯಾಂಕ್ ಖಾತೆ ಸಂಖ್ಯೆಯನ್ನೂ ಬಹಿರಂಗಗೊಳಿಸಿದರು. ತಾನು ಬಹಿರಂಗಗೊಳಿಸಿರುವ ಯಾವುದೇ ಮಾಹಿತಿ ತಪ್ಪಾಗಿದ್ದರೆ ತನ್ನ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಲು ಮತ್ತು ತನ್ನನ್ನು ಜೈಲಿಗೆ ಕಳುಹಿಸಲು ಸಿಂಗ್ ಸ್ವತಂತ್ರರಿದ್ದಾರೆ ಎಂದು ಕೇಜ್ರಿ ಸವಾಲು ಹಾಕಿದರು.
ಮಾಜಿ ಮುಖ್ಯಮಂತ್ರಿ ವಿರುದ್ಧ ತೀವ್ರ ಟೀಕಾಪ್ರಹಾರ ಮಾಡಿದ ಅವರು, 2002ರಲ್ಲಿ ಅಧಿಕಾರಕ್ಕೇರುವ ಮುನ್ನ ಸಿಂಗ್ ದಿವಾಳಿಯೆದ್ದಿದ್ದರು ಮತ್ತು ತನ್ನ ‘ಮೋತಿ ಮಹಲ್ ’ಗೆ ಸುಣ್ಣ ಬಳಿಸಲೂ ಸಾಕಷ್ಟು ಹಣ ಅವರ ಬಳಿಯಿದ್ದಿರಲಿಲ್ಲ ಎಂದರು. ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ ಸಿಂಗ್ ಮತ್ತು ಅವರ ಕುಟುಂಬ ಸ್ವಿಸ್ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದಿದ್ದು, ಪ್ರತಿ ತಿಂಗಳು ಭಾರೀ ಮೊತ್ತವನ್ನು ವರ್ಗಾಯಿಸುತ್ತಿದ್ದರು ಎಂದು ಆರೋಪಿಸಿದರು.
ಸಿಂಗ್ ಮತ್ತು ಅವರ ಕುಟುಂಬ ವಿದೇಶಿ ಬ್ಯಾಂಕುಗಳಲ್ಲಿ ಗುಡ್ಡೆ ಹಾಕಿರುವ ಹಣವನ್ನು ವಾಪಸ್ ತರುವ ಇಚ್ಛಾಶಕ್ತಿ ಮತ್ತು ಧೈರ್ಯ ನಿಮಗಿದೆಯೇ ಎಂದು ಕೇಜ್ರಿ ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಿದರು. ಕೇಜ್ರಿವಾಲ್ ಆರೋಪವನ್ನು ತಳ್ಳಿಹಾಕಿದ ಅಮರಿಂದರ್ ಸಿಂಗ್, ಅವರು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿಯವರಿಂದ ‘ಹಣ ಪಡೆದಿರುವ ಏಜೆಂಟ್’ ರೀತಿ ವರ್ತಿಸುತ್ತಿದ್ದಾರೆ ಎಂದರು.
ಸ್ವಿಸ್ ಬ್ಯಾಂಕ್ ಖಾತೆಗಳ ಕಪೋಲಕಲ್ಪಿತ ಮತ್ತು ರಾಜಕೀಯ ಪ್ರೇರಿತ ಆರೋಪವನ್ನು ಮತ್ತೊಮ್ಮೆ ಕೆದಕಿದ್ದಕ್ಕಾಗಿ ಕೇಜ್ರಿವಾಲ್‌ರನ್ನು ಗೇಲಿ ಮಾಡಿದ ಸಿಂಗ್, ಅವರು ಈ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗಗೊಳಿಸಬಹುದಿತ್ತು. ಆದರೆ ಸುಳ್ಳು ಆರೋಪಗಳ ಬಗ್ಗೆ ಮಾಧ್ಯಮಗಳನ್ನು ಎದುರಿಸುವುದು ಕಷ್ಟ ಎಂದು ಗೊತ್ತಿದ್ದೇ ಅವರು ಬಹಿರಂಗ ಸಭೆಯಲ್ಲಿ ಇದನ್ನು ಹೇಳಿದ್ದಾರೆ. ಅಲ್ಲಿ ಯಾರೂ ಪ್ರಶ್ನಿಸುವುದಿಲ್ಲ ಎನ್ನುವುದು ಅವರಿಗೆ ಗೊತ್ತು. ಕೇಜ್ರಿ ಬಿಡುಗಡೆಗೊಳಿಸಿರುವ ಬ್ಯಾಂಕ್ ಖಾತೆಗಳ ಸಂಖ್ಯೆಗಳನ್ನೇ 2016,ಮಾರ್ಚ್‌ನಲ್ಲಿ ತನ್ನ ಸಹೋದ್ಯೋಗಿ ಆಶಿಷ್ ಖೇತಾನ್ ಬಿಡುಗಡೆಗೊಳಿಸಿದ್ದರು. ಅದು ಸುಳ್ಳೆಂದು ತಾನೀಗಾಗಲೇ ಸಾಬೀತು ಮಾಡಿದ್ದೇನೆ ಎಂದರು.







