ಆರ್‌ಬಿಐ ಷರತ್ತು; ಮದುವೆಗೆ 2.50 ಲಕ್ಷ ರೂ.ನಗದು ನ.8ರ ತನಕ ಖಾತೆಯಲ್ಲಿದ್ದರೆ ಮಾತ್ರ ವಿಥ್ ಡ್ರಾ ಸಾಧ್ಯ

ಹೊಸದಿಲ್ಲಿ, ನ.21: ಮದುವೆಗೆ 2.50 ಲಕ್ಷ ರೂ .ಹಣವನ್ನು ಹಿಂಪಡೆಯಬೇಕಾದರೆ ನ.8, 2016ರಂದು (ಅಧಿಸೂಚನೆ ದಿನಾಂಕ) ನಿಮ್ಮ ಖಾತೆಯಲ್ಲಿ ಅಷ್ಟು ಜಮೆ ಇರಬೇಕು ಎಂದು ಭಾರತದ ರಿಸರ್ವ್ ಬ್ಯಾಂಕ್ ಇಂದು ಷರತ್ತು ವಿಧಿಸಿದ್ದು, ಇದು 500 ರೂ. ಮತ್ತು 1,000 ರೂ. ನೋಟು ನಿಷೇಧದ ಹಿನ್ನೆಲೆಯಲ್ಲಿ ತೊಂದರೆ ಅನುಭವಿಸಿದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈಗಾಗಲೇ ಮನೆಯಲ್ಲಿ ಮದುವೆಗೆ ಕೂಡಿಟ್ಟ ಹಣವನ್ನು ನೋಟು ನಿಷೇಧದ ಹಿನ್ನೆಲೆಯಲ್ಲಿ ನೋಟುಗಳ ವಿನಿಮಯಕ್ಕಾಗಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದವರನ್ನು ಆರ್‌ಬಿಐ ಷರತ್ತು ಇಕ್ಕಟ್ಟಿಗೆ ಸಿಲುಕಿಸಿದೆ. ಅಷ್ಟು ಮಾತ್ರವಲ್ಲ ಡಿ.31, 2016ರ ಮೊದಲು ನಡೆಯುವ ಮದುವೆಗೆ ಮಾತ್ರ 2.50 ಲಕ್ಷ ರೂ. ಹಣವನ್ನು ಹಿಂಪಡೆಯಲು ಸಾಧ್ಯ ಎಂದು ಆರ್‌ಬಿಐ ಹೇಳಿದೆ.
ಮದುವೆಗೆ ಹಿಂಪಡೆಯುವ ಅರ್ಜಿಯಲ್ಲಿ ವಧು, ವರನ ಹೆಸರು ಮತ್ತು ವಿಳಾಸ , ಐಡಿ,ಮದುವೆಯ ದಿನಾಂಕ ಮತ್ತಿತರ ವಿವರಗಳನ್ನು ಸಲ್ಲಿಸಬೇಕು. ಹಣವನ್ನು ಹೆತ್ತವರು ಅಥವಾ ಯಾರು ಮದುವೆಯಾಗುತ್ತಾರೋ ಅವರು ಮಾತ್ರ ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯ .
ಮದುವೆಗೆ ಹಣ ಡೆಯುವ ಅರ್ಜಿಯೊಂದಿಗೆ ಮದುವೆ ಆಮಂತ್ರಣ ಪತ್ರ, ಮದುವೆ ಹಾಲ್ ಕಾಯ್ದಿರಿಸಿದ ಬಗ್ಗೆ ನೀಡಿರುವ ಮುಂಗಡ ಹಣದ ರಶೀದಿ, ಕೇಟರಿಂಗ್‌ಗೆ ನೀಡಿದ ಅಡ್ವಾನ್ಸ್ ಹಣದ ಬಗ್ಗೆ ರಶೀದಿ ಮತ್ತಿತರ ದಾಖಲೆಗಳನ್ನು ನೀಡಬೇಕು.
ಬ್ಯಾಂಕ್‌ನಲ್ಲಿ ಹಿಂಪಡೆಯಲಾಗುತ್ತಿರುವ ಹಣವನ್ನು ಯಾರಿಗೆ ನೀಡಲಾಗುತ್ತಿದೆ ಎಂಬ ಪಟ್ಟಿಯನ್ನು ನೀಡಬೇಕು ಎಂದು ಆರ್‌ಬಿಐ ತಿಳಿಸಿದೆ.





