ರಣಜಿ ಟ್ರೋಫಿ: ಕರ್ನಾಟಕ ಕನಿಷ್ಠ ಮೊತ್ತಕ್ಕೆ ಆಲೌಟ್

ಹೊಸದಿಲ್ಲಿ, ನ.21: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಗೌತಮ್ ಏಕಾಂಗಿ ಹೋರಾಟದ ಹೊರತಾಗಿಯೂ ಕರ್ನಾಟಕ ತಂಡ ಸೋಮವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಒಡಿಶಾದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟಾಗಿದೆ.
ಟಾಸ್ ಜಯಿಸಿದ ಒಡಿಶಾ ತಂಡ ಕರ್ನಾಟಕವನ್ನು ಬ್ಯಾಟಿಂಗ್‌ಗೆ ಇಳಿಸಿತು. ಒಡಿಶಾದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 179 ರನ್‌ಗೆ ಆಲೌಟಾಯಿತು. ಗೌತಮ್(54 ರನ್, 84 ಎಸೆತ, 8 ಬೌಂಡರಿ) ಅಗ್ರ ಸ್ಕೋರರ್ ಎನಿಸಿಕೊಂಡರು.
ಕರ್ನಾಟಕ 6 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆಗ ಎರಡನೆ ವಿಕೆಟ್‌ಗೆ 52 ರನ್ ಸೇರಿಸಿದ ಆರ್. ಸಮರ್ಥ್(26) ಹಾಗೂ ರಾಬಿನ್ ಉತ್ತಪ್ಪ(23) ತಂಡಕ್ಕೆ ಆಧಾರವಾದರು. ಆದರೆ, ಈ ಇಬ್ಬರು 3 ಎಸೆತಗಳ ಅಂತರದಲ್ಲಿ ರನೌಟಾದಾಗ ಕರ್ನಾಟಕ ಭಾರೀ ಹಿನ್ನಡೆ ಅನುಭವಿಸಿತು.
ಗೌತಮ್ 54 ರನ್ ಗಳಿಸಿ ಕೊನೆಯ ಬ್ಯಾಟ್ಸ್‌ಮನ್ ಆಗಿ ಪೆವಿಲಿಯನ್ ಸೇರಿದರು. ಗೌತಮ್ ಹೊರತುಪಡಿಸಿದರೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಒಡಿಶಾದ ಪರ ಬಸಂತ್ ಮೊಹಾಂತಿ(3-46) ಹಾಗೂ ಬಿಪ್ಲಬ್ ಸಮಂಟ್ರೆ(2-20) ಐದು ವಿಕೆಟ್ ಹಂಚಿಕೊಂಡರು.
ಬ್ಯಾಟಿಂಗ್ ಆರಂಭಿಸಿರುವ ಒಡಿಶಾ ದಿನದಾಟದಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 42 ರನ್ ಗಳಿಸಿದೆ. ಗೋವಿಂದ್ ಪೊದ್ದಾರ್(16) ಅಜೇಯವಾಗುಳಿದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 179 ರನ್‌ಗೆ ಆಲೌಟ್
(ಗೌತಮ್ 54, ಸಮರ್ಥ್ 26, ಉತ್ತಪ್ಪ 23, ಕೆ. ಗೌತಮ್ 21, ಮೊಹಾಂತಿ 3-46, ಸಮಂಟ್ರೆ 2-20)
ಒಡಿಶಾ ಪ್ರಥಮ ಇನಿಂಗ್ಸ್: 42/2
(ಪಟ್ನಾಯಕ್ 18, ಪೊದ್ದಾರ್ ಅಜೇಯ 16, ಅರವಿಂದ್ 1-9)
ರಣಜಿ ಟ್ರೋಫಿ: ಮೊದಲ ದಿನದ ಫಲಿತಾಂಶ
ಗುವಾಹಟಿ: ಆಂಧ್ರ ವಿರುದ್ಧ ಕೇರಳ 188/8
ಚೆನ್ನೈ: ಅಸ್ಸಾಂ ವಿರುದ್ಧ ಮಹಾರಾಷ್ಟ್ರ 352/5
ರೋಹ್ಟಕ್: ಬರೋಡಾ 97, 63/3, ಬಂಗಾಳ 76
ವಲ್ಸಾಡ್: ಛತ್ತೀಸ್‌ಗಢ ವಿರುದ್ಧ ಹೈದರಾಬಾದ್ 267/4
ವಯನಾಡ್: ರಾಜಸ್ಥಾನ 238, ದಿಲ್ಲಿ 37/0
ಗಾಝಿಯಾಬಾದ್: ಹರ್ಯಾಣ ವಿರುದ್ಧ ಗೋವಾ 197/6
ಹುಬ್ಬಳ್ಳಿ: ಮುಂಬೈ ವಿರುದ್ಧ ಗುಜರಾತ್ 246/3
ಸೂರತ್: ಹಿಮಾಚಲಪ್ರದೇಶ ವಿರುದ್ಧ ಸರ್ವಿಸಸ್ 276/3
ಮುಂಬೈ: ತ್ರಿಪುರಾ ವಿರುದ್ಧ ಜಮ್ಮು-ಕಾಶ್ಮೀರ 270/6
ದಿಲ್ಲಿ: ಕರ್ನಾಟಕ 179, ಒಡಿಶಾ 42/2
ದಿಲ್ಲಿ: ಮ.ಪ್ರ. ವಿರುದ್ಧ ರೈಲ್ವೇಸ್ 249/2
ನಾಗ್ಪುರ: ತಮಿಳುನಾಡು ವಿರುದ್ಧ ಪಂಜಾಬ್ 241/6
ದಿಲ್ಲಿ: ಸೌರಾಷ್ಟ್ರ 301, ವಿದರ್ಭ 4/0.







