‘ಬಿಸಿಸಿಐ ಉನ್ನತಾಧಿಕಾರಿಗಳನ್ನು ಉಚ್ಚಾಟಿಸಿ, ವೀಕ್ಷಕರನ್ನು ನೇಮಕ ಮಾಡಿ’
ಸುಪ್ರೀಂಕೋರ್ಟ್‌ಗೆ ಲೋಧಾ ಸಮಿತಿ ಮನವಿ

ಹೊಸದಿಲ್ಲಿ, ನ.21: ಬಿಸಿಸಿಐನ ಇಡೀ ಆಡಳಿತ ಮಂಡಳಿಯನ್ನು ಉಚ್ಚಾಟಿಸಬೇಕು. ಕ್ರಿಕೆಟ್ ಮಂಡಳಿಯ ಆಡಳಿತವನ್ನು ನೋಡಿಕೊಳ್ಳಲು ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈಯನ್ನು ವೀಕ್ಷಕರನ್ನಾಗಿ ನೇಮಕ ಮಾಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಲೋಧಾ ಸಮಿತಿ ಮನವಿ ಮಾಡಿದೆ.
ಬಿಸಿಸಿಐ ಹಾಗೂ ಮಾನ್ಯತೆ ಪಡೆದಿರುವ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಸಮಿತಿ ಶಿಫಾರಸು ಮಾಡಿರುವ ಕೆಲವೇ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು. ಇದರಿಂದ ಕೆರಳಿರುವ ಸುಪ್ರೀಂಕೋರ್ಟ್, ಬಿಸಿಸಿಐನ ಸಂವಿಧಾನವನ್ನು ಟೀಕಿಸಿದ್ದಲ್ಲದೆ, ಕ್ರಿಕೆಟ್‌ಮಂಡಳಿಯ ಸಂವಿಧಾನ ಆಡಳಿತದಲ್ಲಿ ಪಾರದರ್ಶಕತೆ ತರಲು ಸೂಕ್ತವಾಗಿಲ್ಲ ಎಂದು ಹೇಳಿದೆ.
ಅಕ್ಟೋಬರ್ 21 ರಂದು ನೀಡಿರುವ ತೀರ್ಪಿನಲ್ಲಿ ಬಿಸಿಸಿಐನ ಆರ್ಥಿಕ ಸ್ವಾತಂತ್ಯಕ್ಕೆ ನಿರ್ಬಂಧ ಹೇರಿತ್ತು. ರಾಜ್ಯ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡದಂತೆ ಆದೇಶಿಸಿತ್ತು. ಈಗ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಗೆ ಸೀಮಿತ ಹಣ ಬಿಡುಗಡೆಗೆ ಸಮ್ಮತಿ ಸೂಚಿಸಿತ್ತು.
ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ಸುಪ್ರೀಂಕೋರ್ಟ್ 2015ರಲ್ಲಿ ರಚನೆ ಮಾಡಿತ್ತು. ಲೋಧಾ ಸಮಿತಿಯು ಬಿಸಿಸಿಐ ಹಾಗೂ ಅದರ ಅಂಗಸಂಸ್ಥೆಗಳಿಗೆ ಕೆಲವು ಪ್ರಮುಖ ಸುಧಾರಣೆಗೆ ಶಿಫಾರಸು ಮಾಡಿತ್ತು. ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದ ಬಳಿಕ ಈ ಬೆಳವಣಿಗೆ ನಡೆದಿತ್ತು. ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಎರಡು ತಂಡಗಳಿಗೆ 2 ವರ್ಷ ನಿಷೇಧ ಹೇರಲಾಗಿದೆ.







