ರೈಲು ದುರಂತ ಸಂತ್ರಸ್ತರಿಗೆ ಹಳೆ ನೋಟಲ್ಲಿ ಪರಿಹಾರ ನೀಡಿದ ಕೇಂದ್ರ ಸರಕಾರ
ಗಾಯದ ಮೇಲೆ ಬರೆ
ಪುಖರಾಯನ್, ನ.21: ರವಿವಾರ ಮುಂಜಾನೆ ರೈಲು ಹಳಿ ತಪ್ಪಿ ಸಂಭವಿಸಿದ ಭೀಕರ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರಿಗೆ ರದ್ದತಿಯಾದ 500 ರೂಪಾಯಿ ನೋಟುಗಳ ರೂಪದಲ್ಲಿ ಪರಿಹಾರ ನಡೆದ ವಿಚಿತ್ರ ಘಟನೆ ವರದಿಯಾಗಿದೆ. ಈ ಘಟನೆಯಿಂದ ಕಂಗೆಟ್ಟಿರುವ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಕಾನ್ಪುರ ವಲಯದ ಕಮಿಷನರ್ ಇಫ್ತಿಖರುದ್ದೀನ್ ಅವರು ಈ ಬಗ್ಗೆ ಕಾನ್ಪುರ ದೇಹತ್ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಅವರನ್ನು ಸಂಪರ್ಕಿಸಿ ಇಂಥ ಘಟನೆ ನಡೆದಿರುವುದು ನಿಜವೇ ಎಂದು ಸ್ಪಷ್ಟನೆ ಬಯಸಿದ್ದಾರೆ.
ರವಿವಾರ ನಸುಕಿನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ 120 ಮಂದಿ ಮೃತಪಟ್ಟು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಆಶಾ ಮಿಶ್ರಾ ಹಾಗೂ ಅನಿಲ್ ಸೇರಿದಂತೆ ಹಲವು ಮಂದಿಗೆ ಅಪರಿಚಿತರು 5,000 ರೂಪಾಯಿ ಪರಿಹಾರ ಧನ ವಿತರಿಸಿದ್ದು, ನವೆಂಬರ್ 8ರಂದು ಅಮಾನ್ಯಗೊಂಡ 500 ರೂಪಾಯಿಯ ಹತ್ತು ನೋಟುಗಳನ್ನು ನೀಡಲಾಗಿದೆ. ಈ ಹಣ ನೀಡಿದ ವ್ಯಕ್ತಿಗಳು, ರೈಲ್ವೆ ವತಿಯಿಂದ ಈ ಪರಿಹಾರ ಮೊತ್ತ ನೀಡಿದ್ದಾಗಿ ಹೇಳಿದರು ಎಂದು ಗಾಯಾಳುಗಳ ಸಂಬಂಧಿಕರು ವಿವರಿಸಿದರು. ಆದರೆ ರೈಲ್ವೆ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಈ ಹಣವನ್ನು ಯಾರು ವಿತರಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ಕೆಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ನೀಡಿದ್ದಾರೋ ಅಥವಾ ರೈಲ್ವೆ ಸಿಬ್ಬಂದಿ ನೀಡಿದ್ದಾರೋ ಎನ್ನುವುದು ಖಚಿತವಾಗಿಲ್ಲ ಎಂದು ಬಿಜೆಪಿ ಮುಖಂಡ ಆರ್.ಪಿ.ಸಿಂಗ್ ಹೇಳಿದರು. ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಈ ಬಗ್ಗೆ ತಕ್ಷಣ ಟ್ವೀಟ್ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.







