ಹೊಸ ಆಗ್ರಾ-ಲಕ್ನೊ ಎಕ್ಸ್‌ಪ್ರೆಸ್ ವೇಯ ಮೇಲೆ ಯುದ್ಧ ವಿಮಾನ ಇಳಿಕೆಗೆ ಬೀದಿನಾಯಿ ಕಾಟ!
ಉನ್ನಾವೊ, ನ.21: ಭಾರತೀಯ ವಿಮಾನ ದಳದ(ಐಎಎಫ್) ಮೊದಲ ಸುಖೋಯಿ-30 ಯುದ್ಧ ವಿಮಾನವು ಹೊಸ ಆಗ್ರಾ-ಲಕ್ನೊ ಎಕ್ಸ್‌ಪ್ರೆಸ್ ವೇಯಲ್ಲಿ ಇಳಿದು ಮುಂದುವರಿಯಲಿದ್ದ ನಿಮಿಷಕ್ಕೂ ಮೊದಲೇ ಅತಿ ಜಾಗರೂಕತೆಯಿಂದ ತಾಲೀಮು ನಡೆಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಬೀದಿ ನಾಯಿಯೊಂದು ನುಗ್ಗಿದೆ.
ಆ ನಾಯಿಯು ವಿಮಾನ ಪಟ್ಟಿಯ(ಏರ್‌ಸ್ಟ್ರಿಪ್) ನಡುವೆ ಪ್ರದರ್ಶನದ ಕುದುರೆಯಂತೆ ಸೆಟೆದುಕೊಂಡು ನಡೆಯಿತು. ಇದರಿಂದಾಗಿ ಐಎಎಫ್ ತನ್ನ ಉನ್ನತ ಕ್ಷಿಪಣಿ ಯುದ್ಧ ವಿಮಾನದ ಸಾಹಸವನ್ನು ಕೈಬಿಡಬೇಕಾದ ಹಂತಕ್ಕೆ ಬಂದಿತ್ತು.
ದಿಲ್ಲಿ ಹಾಗೂ ಲಕ್ನೊಗಳ ನಡುವಿನ ಪ್ರಯಾಣದ ಸಮಯವನ್ನು ಅರ್ಧಕ್ಕೆ ಇಳಿಸುವ ನಿರೀಕ್ಷೆಯಿರುವ ಈ ಹೆದ್ದಾರಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಅವರ ತಂದೆ, ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಉದ್ಘಾಟಿಸಿದ್ದರು.
ಮೊದಲ ಸುಖೋಯಿ ರನ್‌ವೇಯನ್ನು ನಿಜವಾಗಿಯೂ ಸ್ಪರ್ಶಿಸದೆಯೇ ಮೇಲಕ್ಕೇರಬೇಕಾಯಿತು. ಕಾರ್ಯಕ್ರಮಕ್ಕಾಗಿ ಸೇರಿದ್ದ ನೂರಾರು ಜನರನ್ನು ನಿರಾಸೆ ಗೊಳಿಸಲು ಇಚ್ಚಿಸದ ಪೈಲಟ್, ಎರಡನೆ ಪ್ರಯತ್ನದಲ್ಲಿ ನಾಯಿಯ ಉಪಟಳವಿಲ್ಲದೆ ಎಕ್ಸ್‌ಪ್ರೆಸ್ ವೇಯನ್ನು ಸ್ಪರ್ಶಿಸಿದರು.
ಸಂಘಟಕರು ಸರಿಯಾದ ಸಿದ್ಧತೆ ನಡೆಸಿದ್ದರು. ಹಲವು ಪೊಲೀಸರು ರನ್‌ವೇಯ ಇಕ್ಕಡೆಗಳಲ್ಲಿ ಸಾಲಾಗಿ ನಿಂತಿದ್ದರು. ಜನರ ಗುಂಪನ್ನು ತಡೆಬೇಲಿಗಳು ತಡೆದಿದ್ದವು. ಕಾರ್ಯಕ್ರಮ ಯಾವುದೇ ಅಡಚಣೆಯಿಲ್ಲದೆ ಪೂರ್ಣಗೊಳ್ಳುವುದನ್ನು ಖಿಚಿತಪಡಿಸಲು ಐಎಎಫ್‌ನ ಸುರಕ್ಷಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಆ ನಾಯಿ ಎಲ್ಲಿಂದ ಹೇಗೆ ಒಳಗೆ ನುಗ್ಗಿತೋ ಸ್ಪಷ್ಟವಾಗಿಲ್ಲ. ದೊಡ್ಡ ಸುಖೋಯಿ ವಿಮಾನದ ಯೋಜಿತ ಇಳಿಕೆಯ ಸ್ವಲ್ಪವೇ ಮೊದಲು ಈ ಶ್ವಾನ ಪ್ರವೇಶ ನಡೆದಿತ್ತು. ಆದುದರಿಂದ ಯಾರೇ ಪೊಲೀಸ್ ಸಿಬ್ಬಂದಿಗೆ ರನ್‌ವೇ ಪ್ರವೇಶಿಸಿ ಅವನ್ನು ಓಡಿಸಲು ಅವಕಾಶವಿರಲಿಲ್ಲ.





