ತೊಂದರೆಗೆ ಪ್ರಧಾನಿಯೇ ಹೊಣೆ: ರಾಹುಲ್
ಹೊಸದಿಲ್ಲಿ, ನ.21: ಕೇವಲ 3-4 ಮಂದಿಯ ಹೊರತಾಗಿ ಯಾರೊಡನೆಯೂ ಸಮಾಲೋಚಿಸದೆ ಪ್ರಧಾನಿ ನರೇಂದ್ರ ಮೋದಿ ಭಾರತದ ಚರಿತ್ರೆಯಲ್ಲೇ ಅತಿ ದೊಡ್ಡ ಆರ್ಥಿಕ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದರಿಂದ ಕೋಟ್ಯಂತರ ಭಾರತೀಯರ ಮೇಲಾಗಿರುವ ಪರಿಣಾಮ ನಿವಾರಣೆಯಾಗಿಲ್ಲವೆಂದು ದೊಡ್ಡ ನೋಟು ನಿಷೇಧದ ಕುರಿತಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಇಂದು ಆರೋಪಿಸಿದ್ದಾರೆ.
ಸಾರ್ವಜನಿಕರನ್ನು ಆಕ್ರೋಶಗೊಳಿಸಿರುವ ಅನುಭವಗಳನ್ನು ಹಂಚಿಕೊಳ್ಳಲು ಇಂದು ನಸುಕಿನಲ್ಲಿ ರಾಹುಲ್, ದಿಲ್ಲಿಯ ಎಟಿಎಂ ಒಂದರ ಮುಂದೆ ಸರತಿಯ ಸಾಲಿನಲ್ಲಿ ನಿಂತರೆಂದು ಪಕ್ಷ ಹೇಳಿದೆ. ಇತ್ತೀಚಿನ ವಾರಗಳಲ್ಲಿ ರಾಹುಲ್ ನಗದು ಯಂತ್ರದ ಮುಂದೆ ಸಾಲಲ್ಲಿ ನಿಂತದ್ದು ಇದು ಮೂರನೆಯ ಸಲವಾಗಿದೆ. ತಾನು ಹೋದಾಗಲೆಲ್ಲ ಜನರು ನೋಟು ರದ್ದತಿಯಿಂದ ತೊಂದರೆಗೊಳಗಾಗಿರುವುದನ್ನು ಕಂಡೆನೆಂದು ರಾಹುಲ್ ಹೇಳಿದ್ದಾರೆ.
ಅವರನ್ನು ಹೇಗೆ ಕರೆಯಬೇಕೆಂದೇ ತನಗೆ ತಿಳಿಯುವುದಿಲ್ಲ. ಬಹುಶಃ ಸೂಪರ್-ಪ್ರೈಮ್ ಮಿನಿಸ್ಟರ್ ಎನ್ನಬೇಕೇ? ಅವರು ಈಗೀಗ ಬೇರೆಯೇ ಮಟ್ಟದಲ್ಲಿದ್ದಾರೆ ಎಂದು ಪ್ರಧಾನಿಯ ಸಕಾರಾತ್ಮಕ ನಾಯಕತ್ವದ ಕುರಿತು ಕಾಂಗ್ರೆಸ್‌ನ ಆರೋಪವನ್ನು ನವೀಕರಿಸುವ ಟೀಕೆಯನ್ನು ಅವರು ಮಾಡಿದ್ದಾರೆ.
ಈ ದಿಟ್ಟ ಆರ್ಥಿಕ ಸುಧಾರಣೆಯ ಕುರಿತು ಮೋದಿ ಇದುವರೆಗೆ ಸಂಸತ್‌ನಲ್ಲಿ ಹೇಳಿಕೆ ನೀಡದಿರುವುದನ್ನು ಉಲ್ಲೇಖಿಸಿದ ರಾಹುಲ್, ಪ್ರಧಾನಿಗೆ ಸಂಸತ್‌ಗೆ ಬರುವ ಅಗತ್ಯವೇನಿದೆ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.





