ಊಟಕ್ಕೇ ಇಲ್ಲದಂತೆ ಮಾಡುತ್ತಿದೆ ಹೊಸ 2,000 ರೂ. ನೋಟು ಸಮಸ್ಯೆ ನೂರಾರು!
ಹೊಸದಿಲ್ಲಿ, ನ.21: ಜೇಬಿನಲ್ಲಿ ಹೊಸ 2,000 ರೂ. ಮುಖಬೆಲೆಯ ನೋಟು ಹೊಂದಿರುವ ಹಲವರಿಗೆ ಈಗ ಬೇರೊಂದು ಬಗೆಯ ಬಿಕ್ಕಟ್ಟು ಎದುರಾಗಿದೆ. ಅವರ ಬಳಿ ಹಣವಿದೆ... ಆದರೆ ಚಿಲ್ಲರೆ ನೋಟುಗಳ ಕೊರತೆಯಿಂದಾಗಿ ಅಂಗಡಿಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಲೂ ಅವರಿಗೆ ಸಾಧ್ಯವಾಗುತ್ತಿಲ್ಲ.
ತಮಗೆ ಊಟವೂ ದೊರೆಯುತ್ತಿಲ್ಲ, ವ್ಯಾಸಂಗಕ್ಕೆ ಅಗತ್ಯವಾದ ಫೋಟೊ ಕಾಪಿಗಳನ್ನೂ ಮಾಡಿಸಿಕೊಳ್ಳಲಾಗುತ್ತಿಲ್ಲ ಎಂದು ರಾಜಧಾನಿಯಲ್ಲಿ ಓದುತ್ತಿರುವ ಹೊರ ಊರುಗಳ ಹಲವಾರು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ರವಿವಾರ ಇಲ್ಲಿಯ ಮುಖರ್ಜಿ ನಗರ ನಿವಾಸಿಯಾಗಿರುವ ಪಾಟ್ನಾದ ಅನಿರುದ್ಧ ವರ್ಮಾರ ಪರ್ಸ್‌ನಲ್ಲಿ 2,000 ರೂ.ಗಳ ಗಗರಿಗರಿಯಾದ ಎರಡು ನೋಟುಗಳು ಇದ್ದುವಾದರೂ ಅವರು ಬಾರಾಕಂಭಾದ ಬಳಿಯ ಎಟಿಎಂಗೆ ವಾಪಸಾಗಿದ್ದರು. ‘‘ನನಗೆ 100 ಅಥವಾ 500 ರೂ. ನೋಟುಗಳು ಬೇಕು. ರಸ್ತೆಬದಿಯ ಯಾವುದೇ ಕ್ಯಾಂಟೀನಿಗೆ ಹೋದರೂ ನನ್ನ ಬಳಿಯ 2,000 ರೂ. ನೋಟು ನೋಡಿ ಆಹಾರ ನೀಡಲು ನಿರಾಕರಿಸುತ್ತಿದ್ದಾರೆ. ಒಂದು ಊಟಕ್ಕೆ 500 ರೂ. ವ್ಯಯಿಸಲು ನನಗೆ ಸಾಧ್ಯವಿಲ್ಲ’’ ಎಂದು ಅವರು ಹೇಳಿದರು.
ಹೆಚ್ಚಿನ ಎಟಿಎಂಗಳಲ್ಲಿ ಸಣ್ಣ ಮುಖಬೆಲೆಯ ನೋಟುಗಳಿಲ್ಲ. ಹೀಗಾಗಿ ಪರಿಸ್ಥಿತಿ ತೀರ ಬಿಗಡಾಯಿಸಿದೆ. 500 ರೂ.ಗಳ ತರಕಾರಿಗಳು ಮತ್ತು ಹಣ್ಣುಗಳನ್ನು ಖರೀದಿಸಲು ತನಗೆ ಸಾಧ್ಯವಿಲ್ಲ ಎಂದವರು ಇಲ್ಲಿಯ ಅಮರ್ ಕಾಲನಿಯಲ್ಲಿ ವಾಸವಾಗಿರುವ ವಿದ್ಯಾರ್ಥಿನಿ ಉತ್ತರಾಖಂಡ್‌ನ ಸ್ವಾತಿ ರಾವತ್. ತನ್ನ ಬಳಿ ಕೇವಲ 50 ರೂ.ಗಳ ಚಿಲ್ಲರೆ ನೋಟುಗಳು ಇದ್ದದ್ದರಿಂದ ಅವರಿಗೆ ಕೇವಲ ಅರ್ಧ ಕೆ.ಜಿ. ಸೇಬು ಖರೀದಿಸಲು ಸಾಧ್ಯವಾಗಿತ್ತು.
ಕಿರೋರಿಮಲ್ ಕಾಲೇಜಿನ ವಿದ್ಯಾರ್ಥಿನಿ ಶಿಖಾ ಶರ್ಮಾ ವಿಜಯ ನಗರದಲ್ಲಿನ ಝೆರಾಕ್ಸ್ ಅಂಗಡಿ ಯಲ್ಲಿ ತನ್ನ ಬಳಿಯಿದ್ದ 2,000 ರೂ. ನೋಟನ್ನು ದಾಟಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು. ಅವರಿಗೆ ಪಠ್ಯಪುಸ್ತಕದ 12 ಪುಟಗಳ ಝೆರಾಕ್ಸ್ ಪ್ರತಿಗಳು ಅತ್ಯಗತ್ಯವಾಗಿದ್ದವು. ಆದರೆ ಅಂಗಡಿಯವನ ಬಳಿ 2,000 ರೂ. ನೋಟಿಗೆ ಚಿಲ್ಲರೆಯಿರಲಿಲ್ಲ.





