ಡಿ.9ರಿಂದ ಬದಿಯಡ್ಕದಲ್ಲಿ ‘ವಿಶ್ವ ತುಳುವೆರೆ ಆಯನೊ’
ಮಂಗಳೂರು, ನ.21: ಬದಿಯಡ್ಕದ ತುಳುವೆರೆ ಆಯನೊ ಕೂಟದ ವತಿಯಿಂದ ‘ವಿಶ್ವ ತುಳುವೆರೆ ಆಯನೊ-2016’ರ ಕಾರ್ಯಕ್ರಮ ಡಿ.9ರಿಂದ 13ರವರೆಗೆ ಕಾಸರಗೋಡಿನ ಬದಿಯಡ್ಕದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುದಾಭಿ ತಿಳಿಸಿದ್ದಾರೆ.
ಐದು ದಿನಗಳ ಕಾಲ ಐದು ವೇದಿಕೆಗಳಲ್ಲಿ ನಡೆಯುವ ಸಮ್ಮೇಳನದಲ್ಲಿ ಕನ್ನಡ, ಮಲೆಯಾಳ, ಕೊಂಕಣಿ, ಮರಾಠಿ, ಕರ್ಹಾಡ, ಬ್ಯಾರಿ, ಮಾಪಿಳ್ಳೆ, ಉರ್ದು, ಕುಂದಗನ್ನಡ, ಅರೆಗನ್ನಡ, ಕೊಡವ, ಹವ್ಯಕ ಮೊದಲಾದ ಭಾಷೆಗಳ ಸಂಗವ ನಡೆಯಲಿದೆ ಎಂದವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತುಳುನಾಡಿನ ದೈವಾರಾಧನೆ ನಿನ್ನೆ-ಇಂದು-ನಾಳೆ, ತುಳುನಾಡುವ ಒತ್ತೊರ್ಮೆ (ಜನಮೈತ್ರಿ- ಸಂಗಮ), ತುಳು ಸಾಹಿತ್ಯ ಸಮ್ಮೇಳನ, ಶ್ರೀಭೂತನಾಥೇಶ್ವರ ಕ್ರೀಡೋತ್ಸವ(ತುಳುನಾಡ ಗೊಬ್ಬುಲು) ಮತ್ತು ರಾಷ್ಟ್ರೀಯ ಜಾನಪದ ಉತ್ಸವ, ಕೃಷಿ ಸಮ್ಮೇಳನ ನಡೆಯಲಿದೆ ಎಂದವರು ಹೇಳಿದರು.
ಭಾಷೆಗೆ ಸಂಬಂಧಿಸಿದ ಗೋಷ್ಠಿಗಳು, ಜಾನಪದ, ಸಾಂಸ್ಕೃತಿಕ ಪ್ರದರ್ಶನಗಳು, ಗುಡಿ ಕೈಗಾರಿಕೆ, ಕರಕುಶಲ, ಪುಸ್ತಕ ಪ್ರದರ್ಶನ, ಜಾನಪದ ಕ್ರೀಡೆಗಳು, ಮೆರವಣಿಗೆ ಮತ್ತಿತರ ಕಾರ್ಯಕ್ರಮ ನಡೆಯಲಿವೆ ಎಂದರು.
ತುಳುವೆರೆ ಆಯನೊ ಕೂಟದ ಪ್ರ.ಕಾರ್ಯದರ್ಶಿ ಡಾ.ರಾಜೇಶ್ ಆಳ್ವ ಬದಿಯಡ್ಕ, ಕಾರ್ಯಾಧ್ಯಕ್ಷ ಪೊ..ಶ್ರೀನಾಥ್, ಮಂಗಳೂರು ಆಕಾಶವಾಣಿಯ ಡಾ.ವಸಂತ ಕುಮಾರ್ ಪೆರ್ಲ, ತುಳು ಅಕಾಡಮಿಯ ಚಂದ್ರಹಾಸ ರೈ ಉಪಸ್ಥಿತರಿದ್ದರು.
ತುಳುರತ್ನ ಪ್ರಶಸ್ತಿಗೆ ಆಯ್ಕೆ
ವಿಶ್ವ ತುಳುವೆರೆ ಆಯನೊ ತುಳುರತ್ನ ಪ್ರಶಸ್ತಿಗೆ ಹಿರಿಯ ಸಾಹಿತಿಗಳಾದ ಡಾ.ಯು.ಪಿ.ಉಪಾಧ್ಯಾಯ ಮತ್ತು ಡಾ.ಅಮೃತ ಸೋಮೇಶ್ವರ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ನಗದು ಮತ್ತು ಲಕಗಳನ್ನೊಳಗೊಂಡಿದೆ.







