ಕರ್ಣಾಟಕ ಬ್ಯಾಂಕಿನಿಂದ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರಗಳ ಕೊಡುಗೆ
ಮಂಗಳೂರು,ನ.22: ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಮಂಡ್ಯ ಜಿಲ್ಲೆಯ ಬೆಳ್ಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ಎಎಚ್‌ಆರ್‌ಸಿ)ಕ್ಕೆ ಎರಡು ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡಿದೆ.
ಇತ್ತೀಚಿಗೆ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬ್ಯಾಂಕಿನ ಎಂಡಿ ಹಾಗೂ ಸಿಇಒ ಪಿ.ಜಯರಾಮ ಭಟ್ ಅವರು ಡಯಾಲಿಸಿಸ್ ಯಂತ್ರಗಳನ್ನು ಹಸ್ತಾಂತರಿ ಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳು ಇಂದಿನ ದಿನಗಳಲ್ಲಿ,ವಿಶೇಷವಾಗಿ ಗ್ರಾಮೀಣ ಬಡಜನತೆಗೆ ಕಳವಳದ ವಿಷಯವಾಗಿದೆ. ಅವರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತಿರುವ ಆದಿಚುಂಚನಗಿರಿ ಆಸ್ಪತ್ರೆಯ ಈ ಮಹಾಕಾರ್ಯದಲ್ಲಿ ಕೈಜೋಡಿಸಲು ನಮ್ಮ ಬ್ಯಾಂಕಿಗೆ ಸಂತಸವಾಗುತ್ತಿದೆ ಎಂದು ಹೇಳಿದರು.
ಬ್ಯಾಂಕಿನ ಮಾಜಿ ನಿರ್ದೇಶಕ ಮಂಜುನಾಥ ಎಸ್.ವಿ.,ಹಿರಿಯ ಅಧಿಕಾರಿಗಳಾದ ಗೋಕುಲದಾಸ ಪೈ, ರಾಮಚಂದ್ರ ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ.ಎಂ.ಮನೋಹರ ಮತ್ತಿತರರು ಉಪಸ್ಥಿತರಿದ್ದರು.







