ಕಾನೂನಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ: ಮಲ್ಲನಗೌಡ ಪಾಟೀಲ
ಹೋಬಳಿ ಮಟ್ಟದ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

ಮೂಡುಬಿದಿರೆ, ನ.22: ಕಾನೂನು ಕೇವಲ ಇಲಾಖೆಗಳಿಗಷ್ಟೇ ಸೀಮಿತವಲ್ಲ. ಕಾನೂನಿನ ಬಗ್ಗೆ ತಪ್ಪುಕಲ್ಪನೆ ಹೋಗಲಾಡಿಸಿ ಜನರಲ್ಲಿ ಕಾನೂನು ಅರಿವು ಮೂಡಿಸಲು ಜನತಾ ನ್ಯಾಯಾಲಯ ಸಹಕಾರಿ. ಜನರಲ್ಲಿ ಕಾನೂನು ಜಾಗೃತಿ ಮೂಡಿಸಿ, ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಪಾಟೀಲ ಹೇಳಿದರು.
ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ನ್ಯಾಯವಾದಿಗಳ ಸಂಘ ಮೂಡುಬಿದಿರೆ, ಕಂದಾಯ ಇಲಾಖೆ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಪುರಸಬೆ ಮೂಡುಬಿದಿರೆ ಹಾಗೂ ನಗರ ಪಂಚಾಯತ್ ಮೂಲ್ಕಿ, ಗ್ರಾಮ ಪಂಚಾಯತ್ ಬೆಳುವಾಯಿ, ಶಿರ್ತಾಡಿ, ತೆಂಕಮಿಜಾರು, ಕಿನ್ನಿಗೋಳಿ ಇವುಗಳ ಸಹಯೋಗದಲ್ಲಿ ನಡೆಯುವ ಮೂಡುಬಿದಿರೆ ಹೋಬಳಿ ಮಟ್ಟದ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನತಾ ನ್ಯಾಯಾಲದಿಂದ ಸಮಾಜದಲ್ಲಿ ಕಾನೂನು ಅರಿವು ಮೂಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಒಂದು ವರ್ಷದಲ್ಲಿ 6,74,567 ಸಾರ್ವಜನಿಕ ವ್ಯಾಜ್ಯಗಳಲ್ಲಿ 5,96,727 ವ್ಯಾಜ್ಯಗಳು ಇತ್ಯರ್ಥವಾಗಿದ್ದು, ಇದು ಎಷ್ಟು ಪರಿಣಾಮಕಾರಿಯಾಗಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ಸುಮಾರು 116.32 ಕೋಟಿ ಹಣಕಾಸು ವ್ಯಾಜ್ಯ ಇತ್ಯರ್ಥಗೊಂಡಿದೆ ಎಂದು ಹೇಳಿದರು.
ಸಹಾಯಕ ಸರಕಾರಿ ಅಭಿಯೋಜಕ ದೇವೇಂದ್ರ ಎನ್.ಪಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಉಚಿತ ಕಾನೂನು ನೆರವು, ಜನತಾ ನ್ಯಾಯಾಲಯದ ಕುರಿತು ಮಾತನಾಡಿದರು.
ಮೂಡುಬಿದಿರೆ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ ಅರುಣಾ ಕುಮಾರಿ ಎ. ಉಪಸ್ಥಿತರಿದ್ದರು. ಮೂಡುಬಿದಿರೆ ವಕೀಲರ ಸಂಘದ ಉಪಾಧ್ಯಕ್ಷ ನಾಗೇಶ್ ಸ್ವಾಗತಿಸಿದರು. ಜಯಪ್ರಕಾಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಪ್ರವೀಣ್ ಲೋಬೋ ವಂದಿಸಿದರು.







